ದೆಹಲಿಯಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ತಜ್ಞ ಸಂಸ್ಥೆ ರಚಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಹಸಿರು ಹೊದಿಕೆ ಹೆಚ್ಚಿಸಲು ದೆಹಲಿಯಲ್ಲಿ ಬೃಹತ್ ಅರಣ್ಯೀಕರಣ ಅಭಿಯಾನ ಕೈಗೊಳ್ಳುವ ಕಾರ್ಯವನ್ನು ಸಮಿತಿಗೆ ವಹಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಹೇಳಿದೆ.
ಈ ನಿಟ್ಟಿನಲ್ಲಿ ನ್ಯಾಯಾಲಯದ ನಿರ್ದೇಶನದಂತೆ ವಿವಿಧ ಹಂತಗಳನ್ನು ಜಾರಿಗೆ ತರಲು ಬೇಕಾದ ಕಾಲಮಿತಿಯ ವಿವರ ಒಳಗೊಂಡ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಅರಣ್ಯ ಸಂಶೋಧನಾ ಸಂಸ್ಥೆಗೆ ನಿರ್ದೇಶಿಸಿತು.ಯೋಜನೆಗೆ ಅಗತ್ಯವಿರುವ ನಿಧಿಯ ವಿವರಗಳನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಬೇಕು. ಇದರಿಂದ ಸಮಿತಿಗೆ ಅಗತ್ಯವಾದ ಹಣ ದೊರಕಿಸಿಕೊಡಲು ನಿರ್ದೇಶನ ನೀಡಬಹುದಾಗಿದೆ ಎಂದು ಕೂಡ ಅದು ಹೇಳಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ವಿನಯ್ ಕುಮಾರ್ ಸಕ್ಸೇನಾ ಅವರ ಸೂಚನೆಯ ಮೇರೆಗೆ, ನ್ಯಾಯಾಲಯದ ಅನುಮತಿಯಿಲ್ಲದೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನೂರಾರು ಮರಗಳನ್ನು ಕಡಿದಿದೆ ಎಂದು ಆರೋಪಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿ ಆಲಿಸಿದ ನ್ಯಾಯಾಲಯ ನಂತರ ದೆಹಲಿಯಲ್ಲಿ ಹಸಿರು ಹೊದಿಕೆ ಪ್ರಕರಣ ಕೈಗೆತ್ತಿಕೊಂಡಿತು.
ಕಳೆದ ಡಿಸೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ನಡೆದಾಗ, ರಾಷ್ಟ್ರ ರಾಜಧಾನಿಯಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತನಗೆ ತಿಳಿಸದ ದೆಹಲಿ ಅರಣ್ಯ ಇಲಾಖೆಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.
ರಾಷ್ಟ್ರ ರಾಜಧಾನಿಯ ಹಸಿರು ಹೊದಿಕೆಯನ್ನು ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ಪ್ರಸ್ತಾಪಿಸಲು ಬಾಹ್ಯ ಸಮಿತಿ ನೇಮಿಸುವುದಾಗಿ ನ್ಯಾಯಾಲಯ ಆಗ ಹೇಳಿತ್ತು.