ದೆಹಲಿಯಲ್ಲಿ ಮರ ಗಣತಿಗೆ ಸುಪ್ರೀಂ ಆದೇಶ; ಸಿಇಸಿ ಅನುಮತಿಯಿಲ್ಲದೆ 50ಕ್ಕಿಂತ ಹೆಚ್ಚು ಮರ ಕಡಿಯುವಂತಿಲ್ಲ

ದೆಹಲಿಯ ಮರಗಳ ಸಂರಕ್ಷಣೆ ಕಾಯಿದೆ, 1994ರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಮರ ಕಡಿಯುವ ಮೊದಲು ನ್ಯಾಯಾಲಯದ ಅನುಮತಿ ಪಡೆಯುವಂತೆ ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.
Supreme Court of India, Trees
Supreme Court of India, Trees
Published on

ಮರ ಗಣತಿ ಕೈಗೊಳ್ಳುವಂತೆ ದೆಹಲಿ ಅಧಿಕಾರಿಗಳಿಗೆ ಗುರುವಾರ ಆದೇಶಿಸಿರುವ ಸುಪ್ರೀಂ ಕೋರ್ಟ್‌ ಕೇಂದ್ರೀಯ ಉನ್ನತಾಧಿಕಾರ ಸಮಿತಿಯ ಅನುಮತಿ ಇಲ್ಲದೆ ವೃಕ್ಷ ಪ್ರಾಧಿಕಾರವು 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ [ಎಂಸಿ ಮೆಹ್ತಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ವೃಕ್ಷ ಗಣತಿಗೆ ಅರಣ್ಯ ಸಂಶೋಧನಾ ಸಂಸ್ಥೆಯನ್ನು (ಎಫ್‌ಆರ್‌ಐ) ಸಹ ಭಾಗಿಯಾಗಿಸುವಂತೆ ಅರಣ್ಯ ಇಲಾಖೆಗೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ  ನಿರ್ದೇಶಿಸಿದೆ.  

Also Read
ದೆಹಲಿಯಲ್ಲಿ ಮರಗಳ ಹನನ: ವೃಕ್ಷ ಕಾಯಿದೆಯಡಿ ಅನುಸರಿಸುವ ಕಾರ್ಯವಿಧಾನ ಪರಿಶೀಲಿಸಲಿರುವ ಸುಪ್ರೀಂ ಕೋರ್ಟ್

ಇದಲ್ಲದೆ, ಈ ಪ್ರಕ್ರಿಯೆಯಲ್ಲಿ ನಿವೃತ್ತ ಐಎಫ್‌ಎಸ್ ಅಧಿಕಾರಿಗಳಾದ ಈಶ್ವರ್ ಸಿಂಗ್ ಮತ್ತು ಸುನಿಲ್ ಲಿಮಾಯೆ ಹಾಗೂ ವೃಕ್ಷ ತಜ್ಞ ಪ್ರದೀಪ್ ಸಿಂಗ್  ಅವರ ಸಹಾಯ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.

"ಇವರೆಲ್ಲರೂ ವೃಕ್ಷ ಗಣತಿಯನ್ನು ಕೈಗೊಳ್ಳಲು ತಂಡವಾಗಿ ಕಾರ್ಯನಿರ್ವಹಿಸಬೇಕು. ವೃಕ್ಷ ಪ್ರಾಧಿಕಾರದ ಕೋರಿಕೆಯಂತೆ ಭಾರತ ಸರ್ಕಾರ ಮೂಲಸೌಕರ್ಯಗಳನ್ನು ಒದಗಿಸಬೇಕು " ಎಂದು ನ್ಯಾಯಾಲಯ ಆದೇಶಿಸಿದೆ.

ದೆಹಲಿಯ ಮರಗಳ ಸಂರಕ್ಷಣೆ ಕಾಯಿದೆ, 1994 ರ  ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಮರ ಕಡಿಯುವ ಮೊದಲು ನ್ಯಾಯಾಲಯದ ಅನುಮತಿ ಪಡೆಯುವಂತೆ ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.  

ಮರಗಳನ್ನು ಕಡಿಯಲು ವೃಕ್ಷ ಪ್ರಾಧಿಕಾರ ಅನುಸರಿಸುವ ಕಾರ್ಯವಿಧಾನದ ಬಗ್ಗೆ ಈ ಹಿಂದೆ ಮಾಹಿತಿ ಕೇಳಿದ್ದ ಪೀಠ 50 ಅಥವಾ ಅದಕ್ಕಿಂತ ಹೆಚ್ಚಿನ ಮರಗಳನ್ನು ಕಡಿಯಲು ಅನುಮತಿ ನೀಡಿದಾಗ, ವೃಕ್ಷ ಪ್ರಾಧಿಕಾರ ತಕ್ಷಣವೇ ಸಂಪೂರ್ಣ ದಾಖಲೆಗಳನ್ನು ಸಿಇಸಿಗೆ ರವಾನಿಸಬೇಕು ಎಂದು ಇಂದು ಆದೇಶಿಸಿತು.

Also Read
'ಇಪ್ಪತ್ತೈದು ವರ್ಷಗಳಲ್ಲಿ 2.33 ದಶಲಕ್ಷ ಹೆಕ್ಟೇರ್ ವೃಕ್ಷ ಹೊದಿಕೆ ನಾಶ?' ಕೇಂದ್ರದ ಪ್ರತಿಕ್ರಿಯೆ ಕೇಳಿದ ಎನ್‌ಜಿಟಿ

ಅರ್ಜಿ ತಿರಸ್ಕರಿಸುವ ಅಥವಾ ಭಾಗಶಃ ಅನುಮತಿಸುವ ಅಥವಾ ವೃಕ್ಷ ಪ್ರಾಧಿಕಾರ ಮರ ಕಡಿಯಲು ನೀಡಲಾದ ಅನುಮತಿಯ ಹಿಂದಿನ ಕಾರಣಗಳನ್ನು ಮಾರ್ಪಡಿಸುವ ಅಧಿಕಾರವನ್ನು ಸಿಇಸಿಗೆ ನೀಡಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿತು.

ಮರಗಳನ್ನು ಸಂರಕ್ಷಿಸುವುದು ಮತ್ತು ಉಳಿಸುವುದೇ ವೃಕ್ಷ ಪ್ರಾಧಿಕಾರದ ಮೂಲ ಕಾರ್ಯವಾಗಿದೆ ಎಂದ ನ್ಯಾಯಾಲಯ, ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ, ಮರಗಳನ್ನು ಕಡಿಯಲು ಅನುಮತಿ ನೀಡಬಹುದು ಎಂದಿದೆ.

Kannada Bar & Bench
kannada.barandbench.com