DK Shivakumar and Supreme Court
DK Shivakumar and Supreme Court DK Shivakumar (Facebook)
ಸುದ್ದಿಗಳು

ಡಿಕೆಶಿ ವಿರುದ್ಧ ಸಿಬಿಐ ತನಿಖೆ: ತಡೆಯಾಜ್ಞೆ ತೆರವಿಗೆ ಸುಪ್ರೀಂ ನಕಾರ; ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಸೂಚನೆ

Bar & Bench

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ [ಸಿಬಿಐ ಮತ್ತು ಡಿ ಕೆ ಶಿವಕುಮಾರ್ ಇನ್ನಿತರರ ನಡುವಣ ಪ್ರಕರಣ].

ಮಧ್ಯಂತರ ನಿರ್ದೇಶನವಾಗಿರುವುದರಿಂದ ತಡೆಯಾಜ್ಞೆ ಹಿಂಪಡೆಯುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ತಿಳಿಸಿತು.

ತಡೆಯಾಜ್ಞೆ ತೆರವು ಮಾಡುವಂತೆ ಸಿಬಿಐ ಈಗಾಗಲೇ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ ಎಂಬ ವಿಚಾರವನ್ನು ಗಮನಿಸಿದ ಸುಪ್ರೀಂ ಕೋರ್ಟ್‌ ಅರ್ಜಿಯನ್ನು ತ್ವರಿತವಾಗಿ ಅಂದರೆ ಇನ್ನೆರಡು ವಾರಗಳಲ್ಲಿ ನಿರ್ಧರಿಸುವಂತೆ ಸೂಚಿಸಿತು.

"ಆಕ್ಷೇಪಾರ್ಹ ಆದೇಶ ಮಧ್ಯಂತರ ಸ್ವರೂಪದಲ್ಲಿದ್ದು ಅದರಲ್ಲಿ ಮಧ್ಯಪ್ರವೇಶಿಸಲು ಒಲವು ತೋರುವುದಿಲ್ಲ, ಅದರಲ್ಲಿಯೂ ಸಿಬಿಐ ಈಗಾಗಲೇ ಹೈಕೋರ್ಟ್‌ನ ತಡೆಯಾಜ್ಞೆ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ" ಎಂದು ಪೀಠ ಹೇಳಿದೆ.

ಇದೇ ಕಾರಣಕ್ಕೆ ಸಿಬಿಐ ತನಿಖೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಹಿಂಪಡೆಯಲು ಜೂನ್‌ನಲ್ಲಿ ಸುಪ್ರೀಂ ಕೋರ್ಟ್ ನಿರಾಕರಿಸಿದ್ದನ್ನು ಇಲ್ಲಿ ನೆನೆಯಬಹುದು. ಕಳೆದ ತಿಂಗಳು ಈ ವಿಚಾರದಲ್ಲಿ ಶಿವಕುಮಾರ್ ಅವರ ಪ್ರತಿಕ್ರಿಯೆ ಕೇಳಲಾಗಿತ್ತು.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್‌ ಅವರ ವಿರುದ್ಧ ಸಿಬಿಐ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ್ದ ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

ಪ್ರಕರಣವು ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ್ದಾಗಿದೆ. 2017ರಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ಬಳಿಕ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು. ದೆಹಲಿ ಸೇರಿದಂತೆ ವಿವಿಧೆಡೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ₹8.59 ಕೋಟಿ ಪತ್ತೆಯಾಗಿದೆ. ಆ ಪೈಕಿ ಶಿವಕುಮಾರ್ ಅವರಿಗೆ ಸೇರಿದ ಜಾಗದಲ್ಲಿ ₹41 ಲಕ್ಷ ರೂ ದೊರೆತಿತ್ತು.

ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 3, 2019ರಂದು ಬಂಧಿಸಲಾಗಿತ್ತು.

ಆದರೆ, ದೆಹಲಿ ಹೈಕೋರ್ಟ್‌ನ ಆದೇಶದ ಮೇರೆಗೆ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡರು. ದೆಹಲಿ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಈ ಮಧ್ಯೆ, ಅದೇ ವರ್ಷ ಸೆಪ್ಟೆಂಬರ್ 9 ರಂದು, ಇ ಡಿ ಪತ್ರ ಆಧರಿಸಿ, ಆಗಿನ ರಾಜ್ಯ ಬಿಜೆಪಿ ಸರ್ಕಾರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ  ರಾಜ್ಯ ಗೃಹ ಇಲಾಖೆಯ ಆದೇಶ ರದ್ದುಗೊಳಿಸುವಂತೆ ಶಿವಕುಮಾರ್ ಅವರು ಏಪ್ರಿಲ್ 20, 2023 ರಂದು ಅರ್ಜಿ ಸಲ್ಲಿಸಿದ್ದರು, ಇದನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಆರ್ ನಟರಾಜನ್ ಅವರು ವಜಾಗೊಳಿಸಿದ್ದರು.

ನಂತರ ಶಿವಕುಮಾರ್‌ ಹೈಕೋರ್ಟ್‌ ವಿಭಾಗೀಯ ಪೀಠದ ಮೊರೆ ಹೋದರು. ಶಿವಕುಮಾರ್‌ ಅವರ ಅರ್ಜಿ ನಿರ್ಧರಿಸುವವರೆಗೆ ಸಿಬಿಐ ತನಿಖೆಗೆ ತಡೆ ನೀಡಿ ನ್ಯಾಯಾಲಯ ಮಧ್ಯಂತರ ಪರಿಹಾರ ಒದಗಿಸಿತು. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್‌ ಜೂನ್ 2023 ರಲ್ಲಿ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ವಾದ ಮಂಡಿಸಿದ್ದರು. ಡಿಕೆ ಶಿವಕುಮಾರ್ ಪರ ಹಿರಿಯ ವಕೀಲರಾದ ದೇವದತ್ ಕಾಮತ್ ಮತ್ತು ವಿಪಿನ್ ಸಾಂಘಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.