ಕ್ರಿಮಿನಲ್ ಪ್ರಕರಣಗಳಲ್ಲಿ ಮಾಧ್ಯಮ ವಿಚಾರಣೆ ತಡೆಯುವುದಕ್ಕಾಗಿ ಅಂತಹ ಪ್ರಕರಣಗಳಲ್ಲಿ ಮಾಧ್ಯಮಗಳಿಗೆ ಕೃತ್ಯದ ವಿವರ ನೀಡುವಾಗ ಪಾಲಿಸಬೇಕಾದ ಮಾರ್ಗಸೂಚಿಗಳ ಕುರಿತು ಸಮಗ್ರ ಕೈಪಿಡಿ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ [ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಈಗಿರುವ ಮಾರ್ಗಸೂಚಿಗಳು ದಶಕಗಳ ಹಿಂದಿನವಾಗಿದ್ದು ಆಗಿನಿಂದ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಮಿನಲ್ ಪ್ರಕರಣ ವರದಿಗೆ ಸಂಬಂಧಿಸಿದಂತೆ ಏರಿಕೆ ಕಂಡುಬಂದಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು.
“ ಮಾಹಿತಿ ನೀಡುವಿಕೆಯ ಸ್ವರೂಪದ ಮೇಲೆ ವಯಸ್ಸು, ಆರೋಪಿಯ ಲಿಂಗ ಮತ್ತು ಅಪರಾಧದ ಸ್ವರೂಪ ಪ್ರಭಾವ ಬೀರುತ್ತದೆ... ಮಾಧ್ಯಮ ವಿಚಾರಣೆ ನಡೆದಾಗ ನ್ಯಾಯದ ಹಾದಿ ದಿಕ್ಕು ತಪ್ಪುತ್ತದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಸಿಬ್ಬಂದಿ ಮಾಧ್ಯಮಗಳಿಗೆ ನೀಡುವ ವಿವರಣೆ ಕುರಿತು ಗೃಹ ಸಚಿವಾಲಯ ಸಮಗ್ರ ಕೈಪಿಡಿ ಸಿದ್ಧಪಡಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ.
ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು (ಡಿಜಿ- ಐಜಿಪಿಗಳು) ತಮ್ಮ ಅಭಿಪ್ರಾಯಗಳನ್ನು ಸಚಿವಾಲಯಕ್ಕೆ ಒಂದು ತಿಂಗಳೊಳಗೆ ಸಲ್ಲಿಸಬೇಕು. ರಾಜ್ಯ ಡಿಜಿಪಿಗಳು ಮತ್ತಿತರ ಭಾಗೀದಾರರ ಅಭಿಪ್ರಾಯ ಪರಿಗಣಿಸಿದ ನಂತರ ಸಚಿವಾಲಯ ಮಾರ್ಗಸೂಚಿ ಸಿದ್ಧಪಡಿಸಬೇಕು. ಇಡೀ ಪ್ರಕ್ರಿಯೆ ಮೂರು ತಿಂಗಳೊಳಗೆ ಪೂರ್ಣಗೊಳ್ಳಬೇಕು ಎಂದು ಪೀಠ ನಿರ್ದೇಶಿಸಿದೆ.
ಮಾಧ್ಯಮ ವರದಿಗಳು ಕೆಲವೊಮ್ಮೆ ಆರೋಪಿಯ ವ್ಯಕ್ತಿತ್ವಕ್ಕೆ ಘಾಸಿಯುಂಟು ಮಾಡುತ್ತವೆ ಮತ್ತು ಪಕ್ಷಪಾತದ ವರದಿಯಿಂದಾಗಿ ಅಪರಾಧದ ಬಗ್ಗೆ ಜನ ಶಂಕೆ ವ್ಯಕ್ತಪಡಿಸುವಂತಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಾಧ್ಯಮಗಳಿಗೆ ವಿವರಣೆ ನೀಡುವಾಗ ಪೊಲೀಸರು ಒದಗಿಸುವ ಮಾಹಿತಿ ವಸ್ತುನಿಷ್ಠ ಸ್ವರೂಪದಲ್ಲಿರಬೇಕು ಮತ್ತು ಆರೋಪಿಗಳ ಕೃತ್ಯದ ಮೇಲೆ ಪ್ರಭಾವ ಬೀರುವಂತಿರಬಾರದು ಎಂದು ಅದು ನುಡಿದಿದೆ.
ಪೊಲೀಸ್ ಎನ್‌ಕೌಂಟರ್‌ಗಳಿಗೆ ಕುರಿತು ಸರ್ಕಾರೇತರ ಸಂಸ್ಥೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಈ ಆದೇಶ ನೀಡಿದೆ.