Supreme Court, NEET 2021
Supreme Court, NEET 2021  
ಸುದ್ದಿಗಳು

[ನೀಟ್‌ ಪರೀಕ್ಷೆ] ಹೆಚ್ಚುವರಿ ಕಾಲಾವಕಾಶ ದೊರೆಯದ ವಿಕಲ ಚೇತನ ಅಭ್ಯರ್ಥಿಗೆ ಪರಿಹಾರ ನೀಡಲು ಸೂಚಿಸಿದ ಸುಪ್ರೀಂ ಕೋರ್ಟ್

Bar & Bench

ನೀಟ್‌ ಪರೀಕ್ಷೆ ಬರೆಯಲು ಅವಶ್ಯವಿದ್ದ ಒಂದು ಗಂಟೆ ಹೆಚ್ಚುವರಿ ಕಾಲಾವಕಾಶ ದೊರೆಯದ ವಿಕಲ ಚೇತನ ವಿದ್ಯಾರ್ಥಿಗೆ ಪರಿಹಾರ ಒದಗಿಸುವಂತೆ ಸುಪ್ರೀಂಕೋರ್ಟ್‌ ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸೇರಿದಂತೆ ವಿವಿಧ ಅಧಿಕಾರಿಗಳಿಗೆ ನಿರ್ದೇಶನ ನೀಡಿತು (ಪ್ರಕಾಶ್‌ ಮತ್ತು ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ ಮತ್ತಿತರರ ನಡುವಣ ಪ್ರಕರಣ). ಆದರೆ, ಇದೇ ವೇಳೆ ನ್ಯಾಯಾಲಯ ಅಭ್ಯರ್ಥಿಗೆ ಮತ್ತೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿತು.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರಿದ್ದ ಪೀಠ, “ಅಂಗವಿಕಲ ವ್ಯಕ್ತಿಗಳಿಗೆ ವಿಶ್ರಾಂತಿಗೆ ಅನುವು ಮಾಡುವ ನಿಯಮಾವಳಿ ಪಾಲಿಸಲು ಪರೀಕ್ಷಾ ಸಂಸ್ಥೆ ಬದ್ಧವಾಗಿರಬೇಕು. ಹಾಗೆ ಪರಿಹಾರ ನೀಡದಿದ್ದರೆ ಅದು ಸರಿಪಡಿಸಲಾಗದ ಹಾನಿ ಉಂಟು ಮಾಡುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಪ್ರಾಧಿಕಾರಕ್ಕೆ ಅವಕಾಶ ನೀಡುವುದಿಲ್ಲ” ಎಂದು ನ್ಯಾಯಾಲಯ ಹೇಳಿತು.

ಡಿಸ್‌ಗ್ರಾಫಿಯಾ (ಬರವಣಿಗೆಗೆ ಅಡ್ಡಿ ಉಂಟು ಮಾಡುವ ಮೆದುಳಿನ ಕಾಯಿಲೆ) ರೋಗದಿಂದ ಬಳಲುತ್ತಿರುವ ವಿಕಲ ಚೇತನ ಅರ್ಜಿದಾರರಿಗೆ ಆಗಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಯಾವ ಪರಿಹಾರ ನೀಡಬಹುದು ಎಂದು ಆಲೋಚಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಪೀಠ ನಿರ್ದೇಶಿಸಿದೆ. ಅರ್ಜಿದಾರರಿಗೆ ಪರಿಹಾರ ನೀಡುವ ಕುರಿತಂತೆ ತನ್ನ ನಿರ್ಧಾರ ತಿಳಿಸಲು ನ್ಯಾಯಾಲಯ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.