ವಿಶೇಷ ಚೇತನ ಮಹಿಳಾ ಫಿರ್ಯಾದಿಯ ಸಾಕ್ಷ್ಯವನ್ನು ಕಡಿಮೆ ಎಂದು ಪರಿಗಣಿಸಲಾಗದು: ಸುಪ್ರೀಂ ಕೋರ್ಟ್

ಸಾಕ್ಷ್ಯ ನುಡಿದ ಸಾಕ್ಷಿಯು ನ್ಯಾಯಾಂಗ ವಿಶ್ವಾಸವನ್ನು ಪ್ರೇರೇಪಿಸುವ ಮಾನದಂಡಗಳನ್ನು ಪೂರೈಸುವವರೆಗೆ, ಅದು ಸಂಪೂರ್ಣ ಕಾನೂನಿನ ತೂಕಕ್ಕೆ ಅರ್ಹವಾಗಿರುತ್ತದೆ ಎಂದು ನ್ಯಾಯಾಲಯವು ಹೇಳಿದೆ.
Justices DY Chandrachud and MR Shah
Justices DY Chandrachud and MR Shah

ಬೇರೆಯವರಿಗಿಂತ ವಿಶೇಷ ಚೇತರು ವಿಭಿನ್ನವಾಗಿ ಸಮಾಜದ ಜೊತೆ ಸಂವಾದ ನಡೆಸುತ್ತಾರೆ ಎಂದ ಮಾತ್ರಕ್ಕೆ ವಿಶೇಷ ಚೇತನ ಮಹಿಳಾ ಫಿರ್ಯಾದಿಯ ಅಥವಾ ವಿಶೇಷ ಚೇತನ ಸಾಕ್ಷಿಯ ಸಾಕ್ಷ್ಯವನ್ನು ದುರ್ಬಲ ಅಥವಾ ಕಡಿಮೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ (ಪತನ್‌ ಜಮಾಲ್‌ ವಾಲಿ ವರ್ಸಸ್‌ ಆಂಧ್ರಪ್ರದೇಶ ರಾಜ್ಯ).

ಸಾಕ್ಷ್ಯ ನುಡಿದ ಸಾಕ್ಷಿಯು ನ್ಯಾಯಾಂಗ ವಿಶ್ವಾಸವನ್ನು ಪ್ರೇರೇಪಿಸುವ ಮಾನದಂಡಗಳನ್ನು ಪೂರೈಸುವವರೆಗೆ, ಅದು ಸಂಪೂರ್ಣ ಕಾನೂನಿನ ತೂಕಕ್ಕೆ ಅರ್ಹವಾಗಿರುತ್ತದೆ ಎಂದು ನ್ಯಾಯಾಲಯವು ಹೇಳಿದೆ.

"ಸಾಕ್ಷಿಯ ವೈಕಲ್ಯದ ಕಾರಣದಿಂದಾಗಿ ಅವರ ಸಾಕ್ಷ್ಯವು ಸಾಮಾನ್ಯ ವ್ಯಕ್ತಿಯ ಸಾಕ್ಷ್ಯಕ್ಕಿಂತ ಭಿನ್ನ ರೂಪದಲ್ಲಿರುವ ಪರಿಣಾಮಗಳ ಬಗ್ಗೆ ಅದನ್ನು ಪರಿಗಣಿಸುವ ನ್ಯಾಯಾಲಯವು ಸೂಕ್ಷ್ಮವಾಗಿರಬೇಕು ಎನ್ನುವುದನ್ನು ನೆನಪಿಸಬೇಕಿಲ್ಲ," ಎಂದು ನ್ಯಾಯಾಲಯ ಹೇಳಿದೆ.

ನ್ಯಾಯ ವ್ಯವಸ್ಥೆಯನ್ನು ಹೆಚ್ಚೆಚ್ಚು ಅಂಗವಿಕಲ-ಸ್ನೇಹಿಯನ್ನಾಗಿ ಮಾಡಲು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ಅವರಿದ್ದ ವಿಭಾಗೀಯ ಪೀಠವು ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಪರಿಶಿಷ್ಟ ಜಾತಿಗೆ ಸೇರಿದ ದೃಷ್ಟಿಹೀನ ಹುಡುಗಿಯ ಮೇಲೆ 2011ರಲ್ಲಿಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ಘೋಷಿತನಾಗಿರುವಾತ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಮೇಲಿನಂತೆ ಹೇಳಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376 ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆ 1989ರ ಸೆಕ್ಷನ್‌ 3(2)(V)ರ ಅಡಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಸೆಷನ್ಸ್‌ ನ್ಯಾಯಾಲಯವು ಮೇಲ್ಮನವಿದಾರರನ್ನು ಅಪರಾಧಿ ಎಂದು ಘೋಷಿಸಿದ್ದು, 2019ರಲ್ಲಿ ಹೈಕೋರ್ಟ್‌ ಅದನ್ನು ಎತ್ತಿಹಿಡಿದಿತ್ತು.

ವಿಶೇಷ ಚೇತನ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿರುವುದನ್ನು ಅನ್ವೇಷಿಸಲು ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣವನ್ನು ಪ್ರಾರಂಭದ ಹಂತವಾಗಿ ಬಳಸಿಕೊಂಡಿತು.

Also Read
ಜಾತಿಯನ್ನು ಹೊರಗಿರಿಸಿ ನೋಡಲಾಗದು: ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ 3(2)(V) ವ್ಯಾಪ್ತಿಯ ಕುರಿತು ಸುಪ್ರೀಂ ತೀರ್ಪು

ಭಾರತದ ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯನ್ನು ವಿಶೇಷ ಚೇತನ ಸ್ನೇಹಿಯಾಗಿಸಲು ವಿಭಾಗೀಯ ಪೀಠವು ಕೆಳಗಿನ ನಿರ್ದೇಶನ ನೀಡಿದೆ:

  1. ಲೈಂಗಿಕ ದೌರ್ಜನ್ಯ ಸಂತ್ರಸ್ತರ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನ್ಯಾಯಿಕ ಅಕಾಡೆಮಿ ಮತ್ತು ರಾಜ್ಯ ನ್ಯಾಯಿಕ ಅಕಾಡೆಮಿಗಳು ವಿಚಾರಣಾಧೀನ ಮತ್ತು ಮೇಲ್ಮನವಿ ನ್ಯಾಯಾಧೀಶರಲ್ಲಿ ಜಾಗೃತಿ ಮೂಡಿಸಬೇಕು.

  2. ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆ 2013ರಲ್ಲಿ ಅಡಕವಾಗಿರುವ ಅಂಶಗಳು ಪರಿಣಾಮಕಾರಿಯಾಗಿ ಜಾರಿಯಾಗಲು ಅಗತ್ಯವಾಗುವಂತೆ ತರಬೇತಿ ಪಡೆದ ವಿಶೇಷ ಬೋಧಕರು ಮತ್ತು ವ್ಯಾಖ್ಯಾನಕಾರರನ್ನು ನೇಮಿಸಬೇಕು.

  3. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಲಿಂಗ ಆಧಾರಿತ ಹಿಂಸಾಚಾರದ ಬಗ್ಗೆ ಒಟ್ಟು ದತ್ತಾಂಶವನ್ನು ನಿರ್ವಹಿಸುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಂಗವೈಕಲ್ಯವು ದತ್ತಾಂಶ ವಿಂಗಡಣೆಯ ಪರಿಗಣನೆಯಲ್ಲಿ ಒಂದಾಗಿರಬೇಕು, ಅದರ ಆಧಾರದ ಮೇಲೆ ಅಂತಹ ದತ್ತಾಂಶವನ್ನು ನಿರ್ವಹಣೆ ಮಾಡಬೇಕು. ಇದರಿಂದ ಸಮಸ್ಯೆಯ ಪ್ರಮಾಣವನ್ನು ಗುರುತಿಸಬಹುದು ಮತ್ತು ಅದಕ್ಕೆ ತಕ್ಕಂತೆ ಪರಿಹಾರ ಕ್ರಮ ತೆಗೆದುಕೊಳ್ಳಬಹುದು.

  4. ವಿಶೇಷ ಚೇತನ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ಎದುರಿಸಲು ಪೊಲೀಸ್ ಅಧಿಕಾರಿಗಳಿಗೆ ನಿಯಮಿತವಾಗಿ ತರಬೇತಿ ನೀಡಬೇಕು. ಈ ತರಬೇತಿಯು ಸಂಬಂಧಪಟ್ಟ ವಿಶೇಷಚೇತನ ವ್ಯಕ್ತಿಯೊಂದಿಗೆ ನೇರವಾಗಿ ಸಂವಹನ ನಡೆಸುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಬೇಕು.

  5. ಯಾವುದೇ ರೀತಿಯ ಲೈಂಗಿಕ ಕಿರುಕುಳಕ್ಕೆ ತುತ್ತಾದಾಗ ತಮಗಿರುವ ಹಕ್ಕುಗಳ ಬಗ್ಗೆ ವಿಶೇಷ ಚೇತನ ಮಹಿಳೆಯರು ಮತ್ತು ಬಾಲಕಿಯರಿಗೆ ತಿಳಿಸಲು ಜಾಗೃತಿ ಮೂಡಿಸುವ ಅಭಿಯಾನಗಳನ್ನು ಸುಲಭಲಭ್ಯ ಸ್ವರೂಪಗಳಲ್ಲಿ ನಡೆಸಬೇಕು.

  6. ಸದರಿ ಪ್ರಕರಣದಲ್ಲಿ ಯುವತಿಯು ಜಗತ್ತನ್ನು ನೋಡುವ ದೃಷ್ಟಿ ಕಳೆದುಕೊಂಡಿದ್ದಾಳೆ. “ಸುತ್ತ ಯಾರಿದ್ದಾರೆ ಎಂಬುದನ್ನು ಸಂತ್ರಸ್ತೆಯು ಅವರು ಮಾಡುವ ಶಬ್ದದಿಂದ ಅರಿಯುತ್ತಾರೆ. ಹಾಗಾಗಿ, ಅವರ ಸಾಕ್ಷ್ಯವು ಮೇಲ್ಮನವಿದಾರರನ್ನು ದೃಷ್ಟಿಯಿಂದ ಗುರುತಿಸಬಹುದಾದ ಮತ್ತಾವುದೇ ಫಿರ್ಯಾದಿಯ ಸಾಕ್ಷ್ಯಕ್ಕೆ ಸಮನಾಗಿರಲು ಅರ್ಹವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ಐಪಿಸಿ ಸೆಕ್ಷನ್‌ 376ರ ಅಡಿ ವಿಧಿಸಲಾದ ಶಿಕ್ಷೆಯನ್ನು ನ್ಯಾಯಾಲಯವು ಎತ್ತಿ ಹಿಡಿಯಿತು. ಆದರೆ, ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಆರೋಪವನ್ನು ನಿರೂಪಿಸಲು ವಿಫಲವಾದ ಕಾರಣ ಅದರಡಿಯ ಶಿಕ್ಷೆಗಳಿಂದ ಆರೋಪಿಯನ್ನು ಖುಲಾಸೆಗೊಳಿಸಿತು.

Related Stories

No stories found.
Kannada Bar & Bench
kannada.barandbench.com