Electric Tower  
ಸುದ್ದಿಗಳು

ವಿದ್ಯುತ್ ವಿತರಣಾ ಕಂಪೆನಿಗಳಿಗೆ 4 ವರ್ಷದೊಳಗೆ ಬಾಕಿ ಮೊತ್ತ ಪಾವತಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಆದೇಶ

ಡಿಸ್ಕಾಮ್‌ಗಳಿಗೆ ನೀಡಬೇಕಾದ ನಿಯಂತ್ರಕ ಮೊತ್ತವನ್ನು 2028ರ ವೇಳೆಗೆ ಪಾವತಿಸಬೇಕು. ಭವಿಷ್ಯದಲ್ಲಿ ಈ ಬಾಕಿ ಮೊತ್ತ ಶೇ 3ರ ಮಿತಿ ಮೀರಬಾರದು ಎಂದು ನ್ಯಾಯಾಲಯ ಹೇಳಿದೆ.

Bar & Bench

ವಿದ್ಯುತ್ ವಿತರಣಾ ಕಂಪನಿಗಳಿಗೆ (ಡಿಸ್ಕಾಮ್‌) ನೀಡಬೇಕಾದ  ನಿಯಂತ್ರಕ ಬಾಕಿ ಮೊತ್ತವನ್ನು ನಾಲ್ಕು ವರ್ಷಗಳ ಒಳಗೆ ಪಾವತಿಸುವಂತೆ ವಿದ್ಯುತ್ ನಿಯಂತ್ರಕರು ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ [ಬಿಎಸ್‌ಇಎಸ್‌ ರಾಜಧಾನಿ ಪವರ್ ಲಿಮಿಟೆಡ್ ಇನ್ನಿತರರು ಮತತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ಗ್ರಾಹಕರ ಮೇಲೆ ಹೊರೆ ಬೀಳುವುದರಿಂದ ಮತ್ತು ನಿಯಂತ್ರಕ ವೈಫಲ್ಯಕ್ಕೆ ಕಾರಣವಾಗುವುದರಿಂದ ಡಿಸ್ಕಾಮ್‌ಗಳಿಗೆ ನೀಡಬೇಕಾದ ನಿಯಂತ್ರಕ ಬಾಕಿ ಮೊತ್ತವನ್ನು (ರೆಗ್ಯುಲೇಟರಿ ಡ್ಯೂ) 2028ರ ವೇಳೆಗೆ ಪಾವತಿಸಬೇಕು ಎಂದು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿತು.

ಡಿಸ್ಕಾಮ್‌ಗಳಿಗೆ ನೀಡಬೇಕಾದ ನಿಯಂತ್ರಕ ಬಾಕಿ ಮೊತ್ತವನ್ನು 2028ರ ವೇಳೆಗೆ ಪಾವತಿಸಬೇಕು. ಭವಿಷ್ಯದಲ್ಲಿ ಈ ಬಾಕಿ ಮೊತ್ತ ಶೇ 3ರ ಮಿತಿ ಮೀರಬಾರದು ಎಂದು ಅದು ತಿಳಿಸಿತು.

ಶಾಸನಬದ್ಧನಿಯಮಾವಳಿಗಳಿದ್ದರೂ ಮತ್ತು ಆದೇಶಗಳನ್ನು ನೀಡಲಾಗುತ್ತಿದ್ದರೂ ರಾಜ್ಯಗಳು  ಹಣ ಪಾವತಿ ಮಾಡುವುದನ್ನು ಬಾಕಿ ಇರಿಸಿಕೊಳ್ಳುತ್ತಲೇ ಇವೆ ಎಂದರೆ ರಾಜ್ಯ ಆಯೋಗಗಳು ಮತ್ತು ವಿದ್ಯುತ್ ಮೇಲ್ಮನವಿ ನ್ಯಾಯಮಂಡಳಿ (ಎಪಿಟಿಇಎಲ್‌) ಎರಡೂ ಮೇಲ್ವಿಚಾರಣೆ ಮಾಡುವಲ್ಲಿ ವಿಫಲವಾಗಿರುವುದನ್ನು ಹೇಳುತ್ತದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಅಸಾಧಾರಣ ಸಂದರ್ಭಗಳಲ್ಲಿ ಬಾಕಿ ಮೊತ್ತ ಪಾವತಿಸದೆ ಹೋದರೂ ದಶಕಗಳ ಕಾಲ ಹಣ ಪಾವತಿಸದೆ ಇರುವುದು 2003ರ ವಿದ್ಯುತ್ ಕಾಯಿದೆಯ ಆಶಯಗಳನ್ನು ಮುಕ್ಕಾಗಿಸುತ್ತದೆ. ನಿಯಂತ್ರಕ ಬಾಕಿ ಎಂಬುದು ಡಿಸ್ಕಾಂ ಮಾಡಿದ ನೈಜ ವೆಚ್ಚ ಮತ್ತು ನಿಯಂತ್ರಣ ಸಂಸ್ಥೆ ಅನುಮತಿಸಿರುವ ಕಡಿಮೆ ಶುಲ್ಕ ಪಾವತಿಯ ನಡುವಿನ ಅಂತರವನ್ನು ಉಲ್ಲೇಖಿಸುತ್ತದೆ.  ಭವಿಷ್ಯದ ಶುಲ್ಕ ಸಂಬಂಧಿತ ಆದೇಶಗಳಲ್ಲಿ ಇವುಗಳನ್ನು ವಸೂಲಿ ಮಾಡುವ ಸಲುವಾಗಿ ಈ ಹಿಂಬಾಕಿಯನ್ನು ಮುಂದೂಡಿರಲಾಗುತ್ತದೆ ಎಂದು ನ್ಯಾಯಾಲಯವು ಸ್ಪಷ್ಪಪಡಿಸಿತು.

ಸೂಕ್ತ ಲೆಕ್ಕಪತ್ರ ನಿರ್ವಹಣೆ ಮತ್ತು ಕಾಲಮಿತಿ ಇಲ್ಲದೆ ಹೋದರೆ, ಅಂತಹ ಬಾಕಿ ಪಾವತಿ ಮುಂದೂಡಿಕೆ ದೊಡ್ಡ ಪ್ರಮಾಣದ  ಹೊರೆಗೆ ಕಾರಣವಾಗಲಿದ್ದು ಅಂತಿಮವಾಗಿ ಗ್ರಾಹಕರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ನುಡಿಯಿತು.  

ಹಿಂದಿನ ವರ್ಷಗಳ ಬಾಕಿ ಮೊತ್ತ ಪಡೆಯಲು ಅನುಮತಿ ನಿರಾಕರಿಸಿ 2011 ಮತ್ತು 2014ರ ನಡುವೆ ದೆಹಲಿ ವಿದ್ಯುತ್ ನಿಯಂತ್ರಣ ಆಯೋಗವು (ಡಿಇಆರ್‌ಸಿ) ಹೊರಡಿಸಿದ್ದ ಆದೇಶಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲಾಗಿತ್ತು.

ಡಿಸ್ಕಾಂಗಳ ಪರವಾಗಿ ಹಿರಿಯ ನ್ಯಾಯವಾದಿಗಳಾದ  ಅಭಿಷೇಕ್‌ ಮನು ಸಿಂಘ್ವಿ ಕಪಿಲ್ ಸಿಬಲ್ ಮತ್ತವರ ತಂಡ, ಕೇಂದ್ರ ಸರ್ಕಾರದ ಪರವಾಗಿ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್  ವಾದ ಮಂಡಿಸಿದರು.

ದೆಹಲಿ ಸರ್ಕಾರದ ಪರವಾಗಿ ಹಿರಿಯನ್ಯಾಯವಾದಿಗಳಾದ  ಸಿದ್ಧಾರ್ಥ್ ದವೆ ಮತ್ತು ಶಾದನ್ ಫರಾಸತ್ ವಾದ ಮಂಡಿಸಿದರು. ಡಿಇಆರ್‌ಸಿಯನ್ನು ಹಿರಿಯ ವಕೀಲ ನಿಖಿಲ್ ನಯ್ಯರ್ ಪ್ರತಿನಿಧಿಸಿದ್ದರು.