ಎಮರಾಲ್ಡ್ ಕೋರ್ಟ್ ಯೋಜನೆಯ 40 ಅಂತಸ್ತಿನ ಅವಳಿ ಗೋಪುರಗಳನ್ನು ಎರಡು ವಾರಗಳಲ್ಲಿ ಕೆಡವಲು ರಿಯಲ್ ಎಸ್ಟೇಟ್ ಕಂಪನಿ ಸೂಪರ್‌ಟೆಕ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಗೋಪುರಗಳನ್ನು ಕೆಡವುವ ಅವಧಿ ಅಂತಿಮಗೊಳಿಸಲು 72 ಗಂಟೆಗಳ ಒಳಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳ ಸಭೆ ಕರೆಯುವಂತೆ ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ (ನೋಯ್ಡಾ)ದ ಸಿಇಒಗೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠ ಸೂಚಿಸಿತು.
ಸೂಪರ್‌ಟೆಕ್ ಲಿಮಿಟೆಡ್‌ನ 40 ಅಂತಸ್ತಿನ ಅವಳಿ ಗೋಪುರ ಕಟ್ಟಡವನ್ನು ಕೆಡವಲು ಸೂಚಿಸಿದ್ದ ಅಲಹಾಬಾದ್ ಹೈಕೋರ್ಟ್‌ನ 2014 ರ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ಎತ್ತಿ ಹಿಡಿದಿತ್ತು. ಬಿಲ್ಡರ್ ವೆಚ್ಚದಲ್ಲಿ ಅವಳಿ ಗೋಪುರಗಳ ನೆಲಸಮ ಕಾರ್ಯವನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಲು ಅದು ಆದೇಶಿಸಿತ್ತು.
ಅವಳಿ ಗೋಪುರಗಳಲ್ಲಿನ ಎಲ್ಲಾ ಫ್ಲಾಟ್ ಮಾಲೀಕರಿಗೆ ಶೇ 12ರ ಬಡ್ಡಿಯೊಂದಿಗೆ ಹಣ ಮರುಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದ್ದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಎತ್ತಿಹಿಡಿದಿತ್ತು.
ಒಂದು ಗೋಪುರವನ್ನು ಮಾತ್ರ ಕೆಡವಲು ಅನುವಾಗುವಂತೆ ಆದೇಶ ಮಾರ್ಪಡಿಸಲು ಕೋರಿ ಸೂಪರ್‌ಟೆಕ್ ಲಿಮಿಟೆಡ್ ಸಲ್ಲಿಸಿದ ಮನವಿಯನ್ನೂ ಸುಪ್ರೀಂ ಕೋರ್ಟ್ ಕಳೆದ ವರ್ಷ ಅಕ್ಟೋಬರ್ 4 ರಂದು ವಜಾಗೊಳಿಸಿತ್ತು.