ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಮತ್ತು ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೇಮಂತ್ ಗುಪ್ತಾ ಅವರಿದ್ದ ಪೀಠ “ಆರೋಪಗಳು ಮತ್ತು ಅದರಲ್ಲಿ ಶಾಮೀಲಾಗಿರುವ ವ್ಯಕ್ತಿಗಳ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ವಿಚಾರಣೆ ನಡೆಸುವ ಅಗತ್ಯವಿದೆ. ಇದು ಸಾರ್ವಜನಿಕ ವಿಶ್ವಾಸಾರ್ಹತೆಗೆ ಸಂಬಂಧಿಸಿದ ವಿಚಾರ” ಎಂದು ಹೇಳಿತು.
ಮಹಾರಾಷ್ಟ್ರ ಸರ್ಕಾರ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅರ್ಜಿಯ ಊರ್ಜಿತತ್ವದ ಪ್ರಶ್ನೆ ಪರಿಹರಿಸಲು ಹೈಕೋರ್ಟ್ ವಿಫಲವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿ ಕೌಲ್ ಅವರು “ಆರೋಪ ಪ್ರತ್ಯಾರೋಪದ ತಿಕ್ಕಾಟದಿಂದಾಗಿ ಈ ಎಲ್ಲಾ ಸಮಸ್ಯೆಗಳು ಉಂಟಾಗಿವೆ. ಆರೋಪಗಳು ಅತ್ಯಂತ ಗಂಭೀರವಾಗಿದ್ದು ಕುತೂಹಲದ ಮೇಲೆ ಕುತೂಹಲ ಕೆರಳಿಸುತ್ತಿವೆ. ಈ ಸನ್ನಿವೇಶದಲ್ಲಿ ಸಿಬಿಐ ತನಿಖೆಯ ಅಗತ್ಯವಲ್ಲವೇ?” ಎಂದು ಪ್ರಶ್ನಿಸಿದರು.
ಆಗ ಸಿಂಘ್ವಿ ಅವರು “ಈ ಹಿಂದೆಯೇ ಸಿಬಿಐ ತನಿಖೆಗೆ ಸಾಮಾನ್ಯ ಒಪ್ಪಿಗೆಯನ್ನು ಮಹಾರಾಷ್ಟ್ರ ಸರ್ಕಾರ ಹಿಂಪಡೆದಿದೆ. ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ತನಿಖೆಗೆ ಸೂಚಿಸದ ಹೊರತು ರಾಜ್ಯದ ಒಪ್ಪಿಗೆ ಇಲ್ಲದೆ ತನಿಖೆ ನಡೆಸಲು ಸಾಧ್ಯವಿಲ್ಲ. ಆದರೆ ಇಲ್ಲಿ ಪ್ರಾಥಮಿಕ ವಿಚಾರಣೆಯನ್ನು ಮಾತ್ರ ಹೇಳಲಾಗಿದೆ ತನಿಖೆಯನ್ನಲ್ಲ. ಹಾಗಾಗಿ ಸಿಬಿಐ ಉಲ್ಲೇಖವು ಸಿಆರ್‌ಪಿಸಿ ಸೆಕ್ಷನ್ 156ನ್ನು ತಪ್ಪಿಸುವ ನೆಲೆಯಾಗಲಿದೆ” ಎಂದರು.
ಈ ಹಂತದಲ್ಲಿ ನ್ಯಾಯಮೂರ್ತಿ ಕೌಲ್ ಅವರು “ಆಯೋಗದ ತನಿಖೆಗೆ ಆದೇಶಿಸಿದಾಗ ದೇಶಮುಖ್ ರಾಜೀನಾಮೆ ನೀಡಲಿಲ್ಲ. ಹೈಕೋರ್ಟ್ ಆದೇಶದ ನಂತರ ಅವರು ರಾಜೀನಾಮೆ ನೀಡಿದರು. ಅಲ್ಲಿಯವರೆಗೂ ತಮ್ಮ ಹುದ್ದೆಗೆ ಅಂಟಿ ಕುಳಿತಿದ್ದರು… ವಿಚಾರಣೆ ಒಕ್ಕೂಟ ರಚನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನೀವು ಹೇಳಲಾಗದು. ಇದು ಪ್ರತಿದಿನ ಸಂಭವಿಸುವುದಿಲ್ಲ. ಇಬ್ಬರೂ ಸಂಸ್ಥೆಯ ಮುಖ್ಯಸ್ಥರಾಗಿದ್ದು, ಅಲ್ಲೇನೋ ತಪ್ಪಾಗಿದೆ” ಎಂದರು.
ದೇಶ್‌ಮುಖ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, "ಸಾಕ್ಷಿ ಇಲ್ಲದೆ ಸಚಿವರ ವಿರುದ್ಧ ಆರೋಪ ಮಾಡಿದರೆ, ಸಿಬಿಐ ತನಿಖೆಗೆ ಆದೇಶಿಸಬಹುದೇ? ಕಾನೂನಿನಲ್ಲಿ ಅದಕ್ಕೆ ಯಾವುದೇ ಮೌಲ್ಯವಿಲ್ಲ" ಎಂದು ವಾದಿಸಿದರು. ಆಗ ನ್ಯಾಯಮೂರ್ತಿ ಕೌಲ್ ಅವರು ಪರಮ್ ಬಿರ್ ಸಿಂಗ್ ಅವರ ಪತ್ರದ ಬಗ್ಗೆ ಪ್ರಸ್ತಾಪಿಸಿದಾಗ ಸಿಬಲ್ “ಅದಕ್ಕೆ ಯಾವುದೇ ಮನ್ನಣೆ ಇಲ್ಲ ಇದು ಪತ್ರಿಕಾ ಪ್ರಕಟಣೆ ಇದ್ದಂತಿದೆ” ಎಂದರು.
ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ತನಿಖೆ ನಡೆಸಬೇಕೆಂದು ಸಿಬಲ್ ಸೂಚಿಸಿದಾಗ ನ್ಯಾ. ಕೌಲ್ ಅವರು “ನೀವು ತನಿಖಾ ಸಂಸ್ಥೆ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದರು.
ಎರಡೂ ಪಕ್ಷಕಾರರ ವಾದವನ್ನು ಆಲಿಸಿದ ನ್ಯಾಯಾಲಯ ಅಂತಿಮವಾಗಿ ಅರ್ಜಿಗಳನ್ನು ವಜಾಗೊಳಿಸಿತು. ಸಿಬಿಐ ಪ್ರಾಥಮಿಕ ತನಿಖೆಯ ನಡೆಸಲು ಅನುಮತಿಸುವುದಕ್ಕೂ ಮುನ್ನ ಅನಿಲ್ ದೇಶ್‌ಮುಖ್ ಅವರನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಪ್ರಕರಣದ ಸಂಬಂಧ ಆಲಿಸಬೇಕು ಎನ್ನುವ ವಾದದಲ್ಲಿ ಹುರುಳಿಲ್ಲವೆಂದು ನ್ಯಾಯಾಲಯ ತಿರಸ್ಕರಿಸಿತು. ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ ಮತ್ತು ವಿಕ್ರಂ ನಂಕಣಿ ಅವರು ವಕೀಲರಾದ ಉತ್ಸವ್ ತ್ರಿವೇದಿ ಮತ್ತು ಅಡ್ವೊಕೇಟ್ ಆನ್ ರೆಕಾರ್ಡ್ ಅಭಿನಯ್ ಅವರೊಂದಿಗೆ ಪರಮ್ ಬಿರ್ ಸಿಂಗ್ ಪರ ವಾದ ಮಂಡಿಸಿದರು.