Supreme Court of India
Supreme Court of India 
ಸುದ್ದಿಗಳು

ಟೆಲಿಕಾಂ ಕಂಪನಿಗಳ ಎಜಿಆರ್ ಬಾಕಿ ಪಾವತಿ ಸಡಿಲಿಕೆ: ಕೇಂದ್ರದ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

Bar & Bench

ಟೆಲಿಕಾಂ ಕಂಪನಿಗಳು ಪಾವತಿಸಬೇಕಿದ್ದ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ  (ಎಜಿಆರ್) ಕುರಿತ ನಿಯಮಾವಳಿ ಸಡಿಲಿಸಿ  ಕೇಂದ್ರ  ಸಂಪುಟ ಸೆಪ್ಟೆಂಬರ್ 2021ರಲ್ಲಿ ತೆಗೆದುಕೊಂಡಿದ್ದ ನಿರ್ಧಾರ  ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಅನ್ಶುಲ್ ಗುಪ್ತಾ ಮತ್ತು ಪ್ರಧಾನ ಮಂತ್ರಿ ಕಚೇರಿ ನಡುವಣ ಪ್ರಕರಣ].

ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದಂತೆ ತಜ್ಞರ ಅಭಿಪ್ರಾಯ ಮತ್ತು ಎದುರಾಗುವ ಸಾಂದರ್ಭಿಕ ಅಗತ್ಯತೆ ಆಧರಿಸಿ ತೆಗೆದುಕೊಳ್ಳಲಾದ ಉತ್ತಮ ನೀತಿ ನಿರ್ಧಾರಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಸಮರ್ಥನೀಯವಲ್ಲ ಎಂದು ಸೆಪ್ಟೆಂಬರ್ 1ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿದೆ.

ಕೋವಿಡ್‌ನಿಂದಾಗಿ ಆನ್‌ಲೈನ್ ಶಿಕ್ಷಣ ಮತ್ತು ವರ್ಚುವಲ್ ವಿಧಾನದಲ್ಲಿ ನಡೆಯುವ ಸಭೆಗಳ ಸಂಖ್ಯೆ ಹೆಚ್ಚಿದ್ದರಿಂದ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುವ ಅಗತ್ಯತೆ ಎದುರಾಯಿತು ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತು.

ಇದರಿಂದಾಗಿ ಟೆಲಿಕಾಂ ಕಂಪೆನಿಗಳು ಭಾರೀ ಮೊತ್ತದ ಹೂಡಿಕೆ ಮಾಡಬೇಕಾಗಿದ್ದರಿಂದ ಅಂತರ್ಜಾಲ ಬಳಕೆ ಹೆಚ್ಚಳದ ಹೊರತಾಗಿಯೂ ಅವುಗಳ ವ್ಯವಸ್ಥೆಗಳು ಹಾಗೇ ಉಳಿದವು ಎಂದು ನ್ಯಾಯಾಲಯ ತಿಳಿಸಿತು. ಅಲ್ಲದೆ ಕಾನೂನುಬಾಹಿರ, ಅನಿಯಂತ್ರಿತ ಅಥವಾ ಅಸಂವಿಧಾನಿಕವಾದ ವಿಚಾರಗಳು ಇಲ್ಲದೇ ಇದ್ದರೆ ನೀತಿ ನಿರ್ಧಾರಕ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ತಾನು ಬಯಸುವುದಿಲ್ಲ ಎಂದು ಅದು ನುಡಿಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2020ರಲ್ಲಿ ನೀಡಿದ್ದ  ತೀರ್ಪನ್ನು ಜಾರಿಗೊಳಿಸಲು ಕೋರಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಸುಪ್ರೀಂ ಕೋರ್ಟ್‌ 2019ರ ಅಕ್ಟೋಬರ್‌ನಲ್ಲಿ ಟೆಲಿಕಾಂ ಕಂಪೆನಿಗಳು ಬಾಕಿ ಉಳಿಸಿಕೊಂಡಿರುವ ಹಣ ಟೆಲಿಕಾಂ ಹೊರತಾದ ಆದಾಯವಾಗಿದ್ದು ಕಂಪೆನಿಗಳು ಪರವಾನಗಿ ಶುಲ್ಕವಾಗಿ ₹ 92,000 ಕೋಟಿಗಳಷ್ಟು ಪಾವತಿಸಬೇಕಿದೆ ಎಂದು ಹೇಳಿತ್ತು. ಹತ್ತು ವರ್ಷದ ಅವಧಿಯಲ್ಲಿ ಈ ಹಣ ಪಾವತಿಸಲು ಕಂಪೆನಿಗಳಿಗೆ ಅದು ಅವಕಾಶ ಮಾಡಿಕೊಟ್ಟಿತ್ತು. ಆದರೆ ಬಾಕಿ ಮೊತ್ತ ಮರುಲೆಕ್ಕಾಚಾರ ಮಾಡಬೇಕೆಂದು ಕೋರಿ ಭಾರ್ತಿ ಏರ್‌ಟೆಲ್‌, ವೊಡಾಫೋನ್‌- ಐಡಿಯಾ ಹಾಗೂ ಟಾಟಾ ಜುಲೈ 2021ರಲ್ಲಿ ಸಲ್ಲಿಸಿದ್ದವು. ಇದನ್ನು ಪೀಠ ವಜಾಗೊಳಿಸಿತ್ತು.

ಕೆಲ ತಿಂಗಳುಗಳ ಬಳಿಕ ಅಂದರೆ ಸೆಪ್ಟೆಂಬರ್ 2021ರಲ್ಲಿ, ಕೇಂದ್ರ ಸರ್ಕಾರ ಈ ಕಂಪೆನಿಗಳಿಗೆ ಕೆಲ ಪರಿಹಾರ ಕ್ರಮಗಳನ್ನು ಒದಗಿಸುವ ಮೂಲಕ ಪಾವತಿ ನಿಯಮಗಳನ್ನು ಸಡಿಲಗೊಳಿಸಿತು. ಆದರೆ ಕೇಂದ್ರ ಸಂಪುಟ ಕೈಗೊಂಡಿದ್ದ ನಿರ್ಧಾರವನ್ನು ಅನ್ಶುಲ್ ಗುಪ್ತಾ ಎಂಬವರು ರಿಟ್ ಅರ್ಜಿಯ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಪಾವತಿ ನಿಯಮಾವಳಿ ಸಡಿಲಗೊಳಿಸಿದ ತನ್ನ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸುವುದು ಆದರ್ಶಪ್ರಾಯ ಎಂದು ಸೂಚಿಸಿದ್ದರ ಹೊರತಾಗಿಯೂ ಗುಪ್ತಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Anshul_Gupta_vs_Prime_Minister_Office.pdf
Preview