ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಡಿಎಂಕೆಯ ನೀಟ್ ವಿರೋಧಿ ಅಭಿಯಾನ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Bar & Bench

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ವಿರುದ್ಧ ತಮಿಳುನಾಡು ಶಾಲೆಗಳಲ್ಲಿ ಡಿಎಂಕೆ ಪಕ್ಷ ನಡೆಸಿರುವ ಸಹಿ ಅಭಿಯಾನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ರಾಷ್ಟ್ರಮಟ್ಟದ ಪರೀಕ್ಷೆಗಳ ವಿರುದ್ಧದ ಇಂತಹ ಅಭಿಯಾನಗಳ ಬಗ್ಗೆ ಇಂದಿನ ವಿದ್ಯಾರ್ಥಿಗಳು ಉತ್ತಮ ತಿಳಿವಳಿಕೆ ಪಡೆದಿರುತ್ತಾರೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ.

"ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ತಿಳುವಳಿಕೆ ಮತ್ತು ಅರಿವು ಹೊಂದಿದ್ದಾರೆ. ಕೇಂದ್ರ ಯೋಜನೆಯಾದ ರಾಷ್ಟ್ರಮಟ್ಟದ ಪರೀಕ್ಷೆ ವಿರುದ್ಧದ ಇಂತಹ ಅಭಿಯಾನಗಳು ಅವರ ಮೇಲೆ ಪರಿಣಾಮ ಬೀರುವುದಿಲ್ಲ. ಯಾರು ಪ್ರಚಾರ ಮಾಡಲು ಬಯಸುತ್ತಾರೋ ಅವರು ಪ್ರಚಾರ ಮಾಡಲಿ. ಇದು (ಸಂವಿಧಾನದ) 32ನೇ ವಿಧಿಯಡಿ ಬರುವ ಪ್ರಕರಣವಲ್ಲ" ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.

ಭಾರತದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಪೂರ್ವ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಾಗಿದೆ ನೀಟ್‌.

ನೀಟ್ ವಿಳಕ್ಕು, ನಮ್ ಇಳಕ್ಕು (ನೀಟ್ ರದ್ದತಿ ನಮ್ಮ ಗುರಿ) ಹೆಸರಿನ ಅಭಿಯಾನವನ್ನು ತಮಿಳುನಾಡು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ನೇತೃತ್ವದ ಡಿಎಂಕೆ ಈಚೆಗೆ ಆರಂಭಿಸಿತ್ತು. ಅಭಿಯಾನದಡಿ ಸಂಗ್ರಹಿಸಿದ ಸಹಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಲು ಉದ್ದೇಶಿಸಲಾಗಿದೆ.

ಈ ಅಭಿಯಾನ ವಿರೋಧಿಸಿ ವಕೀಲ ಎಂ.ಎಲ್.ರವಿ ಅವರು 2023ರ ನವೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ದಂಡದೊಂದಿಗೆ ಆ ಅರ್ಜಿ ವಜಾಗೊಳಿಸಲು ಒಲವು ತೋರಿದ್ದರಿಂದ ರವಿ ಮನವಿ ಹಿಂಪಡೆದಿದ್ದರು. ಬಳಿಕ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ನೀಟ್ ಸ್ಥಾಪಿತ ಪರೀಕ್ಷೆಯಾಗಿದ್ದು ಸಚಿವರು ಅದರ ವಿರುದ್ಧ ಪ್ರತಿಭಟಿಸಲು ಸಾಧ್ಯವಿಲ್ಲಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (ಪಿಐಎಲ್) ಅವರು ವಾದಿಸಿದ್ದರು. ರಾಜ್ಯದ ಆಡಳಿತ ಪಕ್ಷ ಪೋಷಕರ ಒಪ್ಪಿಗೆಯಿಲ್ಲದೆ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಲಾಗಿದೆ. ಇಂತಹ ಅಭಿಯಾನಗಳು ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳ ಪ್ರೇರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.

ಮತ್ತೊಂದೆಡೆ ನೀಟ್ ಸಿಂಧುತ್ವ ಪ್ರಶ್ನಿಸಿ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಯೊಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿದೆ.

ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುವ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವುದರಿಂದ ನೀಟ್ ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸುತ್ತದೆ ಎಂಬುದು ಸರ್ಕಾರದ ವಾದವಾಗಿದೆ.

ಇದಲ್ಲದೆ, ನೀಟ್ ಪರೀಕ್ಷೆಯು ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಏಕೆಂದರೆ ಇದು ತಮಿಳುನಾಡಿನ ವಿದ್ಯಾರ್ಥಿಗಳ ಮೇಲೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಮೇಲೆ ಮತ್ತು ಕೋಚಿಂಗ್ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದ ರಾಜ್ಯ-ಮಂಡಳಿ ಸಂಯೋಜಿತ ಶಾಲೆಗಳ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆ ದಾವೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿತ್ತು.