Nuh, Mehta
Nuh, Mehta 
ಸುದ್ದಿಗಳು

ಮೇವತ್‌ನಲ್ಲಿ ಬಲವಂತದಿಂದ ಹಿಂದೂಗಳ ಮತಾಂತರ: ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

Bar & Bench

ಹರಿಯಾಣದ ಮೇವತ್‌ ಜಿಲ್ಲೆಯಲ್ಲಿ ಪ್ರಬಲವಾಗಿರುವ ಮುಸ್ಲಿಮ್‌ ಸಮುದಾಯದವರು ಹಿಂದೂಗಳನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಮನವಿಯನ್ನು ಸೋಮವಾರ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ಹೃಷಿಕೇಶ್‌ ರಾಯ್‌ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದಿತು.

ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳನ್ನು ಬಲವಂತದಿಂದ ಮತಾಂತರಗೊಳಿಸಲಾಗಿದೆ. ಮೇವತ್‌ ಎಂದು ಕರೆಯಲಾಗುತ್ತಿದ್ದ ನೂಹ್‌ ಜಿಲ್ಲೆಯಲ್ಲಿ ಹಿಂದೂ ಮಹಿಳೆಯರು ಮತ್ತು ಅಪ್ರಾಪ್ತೆಯರನ್ನು ಅಪಹರಿಸಿ, ಅವರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ವಕೀಲ ವಿಷ್ಣು ಶಂಕರ್‌ ಜೈನ್‌ ಮೂಲಕ ಸಲ್ಲಿಸಿದ್ದ ಮನವಿಯಲ್ಲಿ ವಿವರಿಸಲಾಗಿತ್ತು.

“ಹಿಂದೂ ಮಹಿಳೆಯರು ಸುರಕ್ಷಿತವಾಗಿಲ್ಲ. ಪರಿಶಿಷ್ಟ ಜಾತಿಯವರ ಮೇಲೆ ಮುಸ್ಲಿಮ್‌ ಸಮುದಾಯದವರು ದೌರ್ಜನ್ಯ ಎಸಗಿದ್ದಾರೆ” ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.

ಸಿಬಿಐ ಅಧಿಕಾರಿಗಳು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಪ್ರಕರಣದ ಸಂಬಂಧ ತನಿಖೆ ನಡೆಸಬೇಕು. ಇದರ ನೇತೃತ್ವವನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ವಹಿಸಬೇಕು. ಬಲವಂತದ ಮತಾಂತರ, ಹಿಂದೂ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಹಾಗೂ ಕಾನೂನುಬಾಹಿರವಾಗಿ ಆಸ್ತಿಗಳ ಅತಿಕ್ರಮಣದ ಕುರಿತು ತನಿಖೆಯಾಗಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಕಳೆದ ಹತ್ತು ವರ್ಷಗಳಲ್ಲಿ ಬಲಾತ್ಕಾರದಿಂದ ಹಾಗೂ ಪ್ರಭಾವವನ್ನು ಬಳಸುವ ಮೂಲಕ ಮುಸ್ಲಿಮರಿಗೆ ಬರೆದುಕೊಡಲಾಗಿರುವ ಎಲ್ಲಾ ಕ್ರಯ ಪತ್ರಗಳನ್ನು ರದ್ದುಗೊಳಿಸಬೇಕು ಎಂದೂ ಮನವಿ ಮಾಡಲಾಗಿತ್ತು. ಈ ಪ್ರದೇಶದಲ್ಲಿನ ಹಿಂದೂಗಳ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಹಕ್ಕುಗಳನ್ನು "ಪ್ರಬಲ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯದ ಸದಸ್ಯರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಗಳು ನಾಶ ಮಾಡುತ್ತಿವೆ" ಎಂದು ಮನವಿಯಲ್ಲಿ ಹೇಳಲಾಗಿತ್ತು.

ಸ್ಥಳೀಯ ಪೊಲೀಸರು ಕ್ರಮಕೈಗೊಳ್ಳದೇ ಇರುವುದರಿಂದ ಅಲ್ಲಿ ನೆಲೆಸಿರುವ ಹಿಂದೂಗಳ ಬದುಕು ಶೋಚನೀಯವಾಗಿದೆ ಎಂದೂ ಮನವಿಯಲ್ಲಿ ಹೇಳಲಾಗಿತ್ತು. ತಬ್ಲೀಘಿ ಜಮಾತ್‌ ನೆರವಿನಿಂದ ಮುಸ್ಲಿಮರ ಪ್ರಭಾವ ಹೆಚ್ಚಾಗಿದ್ದು, ಹಿಂದೂಗಳ ಸಂಖ್ಯೆ ಕುಸಿದಿದೆ. 2011ರ ಜನಗಣತಿಯ ಸಂದರ್ಭದಲ್ಲಿ ಇಲ್ಲಿ ಶೇ. 20ರಷ್ಟು ಇದ್ದ ಹಿಂದೂಗಳ ಜನಸಂಖ್ಯೆ ಪ್ರಸಕ್ತ ಶೇ. 10-11ಕ್ಕೆ ಕುಸಿದಿದೆ ಎಂದು ವಿವರಿಸಲಾಗಿದೆ. 2020ರಲ್ಲಿ ನಾಲ್ವರು ಸದಸ್ಯರ ಸಮಿತಿಯು ಹಲವು ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಸಾಕ್ಷ್ಯ ಸಂಗ್ರಹಿಸಿ ಹರಿಯಾಣದ ಮುಖ್ಯಮಂತ್ರಿಗೆ ಸಲ್ಲಿಸಿದ್ದ ವರದಿಯನ್ನು ಮನವಿ ಆಧರಿಸಿತ್ತು.