ವಾಕ್ ಸ್ವಾತಂತ್ರ್ಯ ಎಂದರೆ ದುರುದ್ದೇಶಪೂರಿತ ಹೇಳಿಕೆ ನೀಡುವುದಲ್ಲ ಎಂದು ಪಂಜಾಬ್-ಹರ್ಯಾಣ ಹೈಕೋರ್ಟ್ ಹೇಳಿದ್ದೇಕೆ?

ನಿವೃತ್ತ ಸೇನಾಧಿಕಾರಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ವ್ಯಕ್ತಿಯೊಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಜಾಗೊಳಿಸಿದೆ.
ವಾಕ್ ಸ್ವಾತಂತ್ರ್ಯ ಎಂದರೆ ದುರುದ್ದೇಶಪೂರಿತ ಹೇಳಿಕೆ ನೀಡುವುದಲ್ಲ ಎಂದು ಪಂಜಾಬ್-ಹರ್ಯಾಣ ಹೈಕೋರ್ಟ್ ಹೇಳಿದ್ದೇಕೆ?
YouTube LogoYouTube.com

ಭಾರತೀಯ ಸೇನೆಯ ನಿವೃತ್ತ ಸೇನಾಧಿಕಾರಿಯೊಬ್ಬರ ವಿರುದ್ಧ ಮಾನಹಾನಿಕಾರಕ ವಿಚಾರವನ್ನು ತನ್ನ ಯೂಟ್ಯೂಬ್ ಚಾನೆಲ್ ‘ಸಬ್ಕಾ ಸೈನಿಕ್ ಸಂಘರ್ಷ್ ಕಮಿಟಿ’ಯಲ್ಲಿ ಅಪ್‌ ಲೋಡ್ ಮಾಡಿದ್ದ ಯೂಟ್ಯೂಬ್‌ ಚಾನೆಲೊಂದರ ಮುಖ್ಯಸ್ಥನಿಗೆ (ಯೂಟ್ಯೂಬರ್) ನಿರೀಕ್ಷಣಾ ಜಾಮೀನು ನಿರಾಕರಿಸಿರುವ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ವಾಕ್ ಸ್ವಾತಂತ್ರ್ಯದ ಮಿತಿಗಳಿಗೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ (ಕಪಿಲ್ ದೇವ್ ವರ್ಸಸ್ ಹರ್ಯಾಣ ಸರ್ಕಾರ).

ಇತ್ತೀಚಿಗೆ ಪ್ರಕರಣದ ವಿಚಾರಣೆ ವೇಳೆ ಆರೋಪಿಯ ಜಾಮೀನು ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಚ್ ಎಸ್ ಮದನ್ ಅವರಿದ್ದ ಪೀಠವು ಹೀಗೆ ಹೇಳಿದೆ:

“ಇಂಥ ಆರೋಪಿಗಳು ಸಾಮಾನ್ಯ ಮನುಷ್ಯನ ಖ್ಯಾತಿ, ಪ್ರತಿಷ್ಠೆ ಗೌರವ ಮತ್ತು ಸ್ಥಾನಮಾನಕ್ಕೆ ಕುಂದು ಉಂಟು ಮಾಡುವುದನ್ನೂ ಸರಳವಾಗಿ ಪರಿಗಣಿಸಲಾಗದು. ಪ್ರತಿಯೊಬ್ಬ ಭಾರತೀಯನೂ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಹೊಂದಿರುತ್ತಾನೆ. ಹಾಗೆಂದ ಮಾತ್ರಕ್ಕೆ ಕೆಟ್ಟ ಮತ್ತು ದುರುದ್ದೇಶಪೂರಿತ ಹೇಳಿಕೆ ನೀಡುವ ಮಟ್ಟಕ್ಕೆ ಹೋಗುವುದಲ್ಲ.”
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ದೂರುದಾರರು ಸೇನಾ ತುಕಡಿಯ ಕಮಾಂಡಿಂಗ್ ಅಧಿಕಾರಿಯ ಪತ್ನಿಯಾಗಿದ್ದು, ಅವರಿಗೆ ಆ ತುಕಡಿಯ ಸೈನಿಕರು ಸಲ್ಯೂಟ್ ಮಾಡದಿದ್ದಕ್ಕೆ ಶಿಕ್ಷೆ ವಿಧಿಸಲಾಗಿದೆ ಎಂದು ಯೂಟ್ಯೂಬರ್ ಆರೋಪಿಸಿದ್ದ ಬಗ್ಗೆ ದೂರು ನೀಡಲಾಗಿತ್ತು. ಯೂಟ್ಯೂಬರ್ ತಮ್ಮ ವಿರುದ್ಧ ಅವಮಾನಕಾರಿ ಮತ್ತು ಅನವಶ್ಯಕ ಟೀಕೆಗಳನ್ನು ಮಾಡಿದ್ದು, ಅದು ತನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದು, ಕಿರುಕುಳ ನೀಡಿದೆ ಎಂದು ದೂರುದಾರರು ಮನವಿಯಲ್ಲಿ ವಿವರಿಸಿದ್ದಾರೆ.

ನಿರ್ಬಂಧಿಸಲ್ಪಟ್ಟ ಮತ್ತು ಗೌಪ್ಯವಾದ ಸೇನೆಯ ವಿಡಿಯೊ ತುಣುಕುಗಳು ಮತ್ತು ವಸ್ತುಗಳನ್ನು ಬಳಸಿದ್ದರಿಂದ ಆರೋಪ ಗಂಭೀರವಾಗಿದೆ. ಇದನ್ನು ರಾಷ್ಟ್ರೀಯ ಭದ್ರತೆಯ ಕೋನದಿಂದಲೂ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

“ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ಪಡೆಯುವ ಮಟ್ಟಿಗೆ ಅರ್ಜಿದಾರರು ಸಶಕ್ತರಾಗಿರುವುದು ಅವರ ವಿರುದ್ಧದ ಗಂಭೀರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಆ ಕೋನದಿಂದಲೂ ತನಿಖೆ ನಡೆಸುವ ಅಗತ್ಯವಿದೆ.”
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ವಿಡಿಯೋ ಅಪ್ ಲೋಡ್ ಮಾಡುವ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಸಲು ಆರೋಪಿಯನ್ನು ಕಸ್ಟಡಿಗೆ ಪಡೆಯುವುದು ಅವಶ್ಯ ಎಂಬುದನ್ನು ಪರಿಗಣಿಸಿರುವ ನ್ಯಾಯಪೀಠವು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

Also Read
“ನನ್ನ ತಂದೆ ಮತ್ತು ನಾನಿ ಪಾಲ್ಖಿವಾಲಾ ಅವರಿಗೂ ಮಹಾರಾಷ್ಟ್ರ ವಿಧಾನಸಭೆ ನೋಟಿಸ್ ನೀಡಿತ್ತು”: ಸಿಜೆಐ ಬೊಬ್ಡೆ

ನಿವೃತ್ತ ಮೇಜರ್ ಅವರ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಯೂಟ್ಯೂಬರ್ ವಿಫಲರಾಗಿದ್ದಾರೆ ಎಂಬ ಆಧಾರದಲ್ಲಿ ಅಂಬಾಲದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಆರೋಪಿಯ ನಿರೀಕ್ಷಣಾ ಜಾಮೀನು ಮನವಿಯನ್ನು ಈ ಹಿಂದೆ ವಜಾಗೊಳಿಸಿದ್ದರು.

Related Stories

No stories found.