Rahul Gandhi
Rahul Gandhi 
ಸುದ್ದಿಗಳು

ವಯನಾಡ್‌ನಿಂದ ರಾಹುಲ್ ಗಾಂಧಿ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಜಾ

Bar & Bench

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್‌ ಕ್ಷೇತ್ರದಿಂದ ಚುನಾಯಿತರಾಗಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಅರ್ಜಿಯನ್ನು ವಿಚಾರಣೆಗಾಗಿ ಮೂರು ಬಾರಿ ಕೈಗೆತ್ತಿಕೊಂಡಾಗಲೂ ಅರ್ಜಿದಾರರ ಪರ ಯಾರು ಹಾಜರಾಗದೆ ಇರುವುದರಿಂದ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ವಯನಾಡ್‌ ಮತ್ತು ಎರ್ನಾಕುಲಂ ಲೋಕಸಭಾ ಕ್ಷೇತ್ರಗಳಲ್ಲಿನ ಚುನಾವಣೆ ಪ್ರಶ್ನಿಸಿ ಸರಿತಾ ನಾಯರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು 2019ರ ಅಕ್ಟೋಬರ್‌ 31ರಂದು ಕೇರಳ ಹೈಕೋರ್ಟ್‌ ಅಸಮ್ಮತಿಸಿತ್ತು. ಇದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ಕೇರಳದಲ್ಲಿ ವಿವಾದ ಸೃಷ್ಟಿಸಿದ್ದ ಸೋಲಾರ್‌ ಹಗರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು, ಶಿಕ್ಷೆಗೆ ಗುರಿಯಾಗಿದ್ದನ್ನು ಮುಂದು ಮಾಡಿ ಸರಿತಾ ನಾಯರ್‌ ಅವರ ಉಮೇದುವಾರಿಕೆಯನ್ನು ವಯನಾಡ್‌ ಮತ್ತು ಎರ್ನಾಕುಲಂ ಚುನಾವಣಾಧಿಕಾರಿಗಳು 2019ರ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಿದ್ದರು. ಎರಡು ಕ್ರಿಮಿನಲ್‌ ಅಪರಾಧದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟ ಹಿನ್ನೆಲೆಯಲ್ಲಿ ಆಯೋಗವು ಅರ್ಜಿದಾರರ ಉಮೇದುವಾರಿಕೆಯನ್ನು ತಿರಸ್ಕರಿಸಿದ್ದು, ಈ ಕಾರಣಕ್ಕಾಗಿ ಅವರ ಮನವಿಯನ್ನು ವಿಚಾರಣೆಗೆ ಪರಿಗಣಿಸಲಾಗದು ಎಂದು ಕೇರಳ ಹೈಕೋರ್ಟ್‌ ಹೇಳಿತ್ತು.

ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಎರಡನೇ ಕ್ಷೇತ್ರವನ್ನಾಗಿ ಕೇರಳದ ವಯನಾಡ್‌ ಅನ್ನು ಆಯ್ಕೆ ಮಾಡಿಕೊಂಡಿದ್ದ ರಾಹುಲ್‌ ಗಾಂಧಿ ಅವರು ದಾಖಲೆಯ 431,770 ಅಂತರದ ಮತಗಳಿಂದ ಗೆದ್ದಿದ್ದರು. ಎದುರಾಳಿ ಸಿಪಿಐ ಅಭ್ಯರ್ಥಿ ಪಿ ಪಿ ಸುನೀರ್‌ ಅವರು 274,597 ಮತ ಪಡೆದಿದ್ದರೆ, ರಾಹುಲ್‌ 706,367 ಮತ ಗಳಿಸಿದ್ದರು.

ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್‌ 8 (3)ರ ಅನ್ವಯ ಅಭ್ಯರ್ಥಿಯು ಕ್ರಿಮಿನಲ್‌ ಅಪರಾಧದಲ್ಲಿ ಎರಡು ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗಿದ್ದರೆ ಅವರ ಉಮೇದುವಾರಿಕೆಯನ್ನು ಚುನಾವಣಾಧಿಕಾರಿ ತಿರಸ್ಕರಿಸಬಹುದಾಗಿದೆ. ಸೋಲಾರ್‌ ಹಗರಣದಲ್ಲಿ ಸರಿತಾ ನಾಯರ್‌ ಅವರಿಗೆ ಪೆರುಂಬವೂರ್‌ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ಜುಲ್ಮಾನೆ ವಿಧಿಸಿತ್ತು.

ಮತ್ತೊಂದು ಪ್ರಕರಣದಲ್ಲಿ ಪಟ್ಟಣಂಥಿಟ್ಟಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸರಿತಾ ಅವರಿಗೆ 45 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಈ ಕಾರಣ ನೀಡಿ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿದ್ದ ಸರಿತಾ ಅವರ ಉಮೇದುವಾರಿಕೆಯನ್ನು ಅಲ್ಲಿನ ಚುನಾವಣಾಧಿಕಾರಿ ತಿರಸ್ಕರಿಸಿದ್ದರು.