ಮಧ್ಯಪ್ರದೇಶ ವಿಧಾನಸಭೆಗೆ ಮಂಗಳವಾರ ನಡೆಯಲಿರುವ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ಹೆಸರನ್ನು ತಾರಾ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟು ಅಕ್ಟೋಬರ್ 30ರಂದು ಆದೇಶಿಸಿದ್ದ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ಸೋಮವಾರ ತಡೆಯಾಜ್ಞೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠವು ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿದ ಇಸಿಐಗೆ ಲಗಾಮು ಹಾಕಿದೆ.
ಉಪಚುನಾವಣೆಯು ಮಂಗಳವಾರಕ್ಕೆ ನಿಗದಿಯಾಗಿದ್ದು, ಪ್ರಚಾರ ಮುಗಿದಿರುವುದರಿಂದ ವಿಷಯ ಪರಿಣಾಮಕಾರಿಯಲ್ಲ ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ಹೇಳಿದರು.
ಅದಾಗ್ಯೂ ಮುಖ್ಯ ನ್ಯಾಯಮೂರ್ತಿ ಹೀಗೆ ಹೇಳಿದರು:
ಇಸಿಐ ಆದೇಶಕ್ಕೆ ತಡೆಯಾಜ್ಞೆ ನೀಡದೇ ಪ್ರತಿಕ್ರಿಯೆ ದಾಖಲಿಸಲು ಸೂಚಿಸುವಂತೆ ನ್ಯಾಯಪೀಠಕ್ಕೆ ಇಸಿಐ ಪರ ವಕೀಲ ದ್ವಿವೇದಿ ಮನವಿ ಮಾಡಿದರು. ಇದಕ್ಕೆ ನ್ಯಾಯಾಲಯವು ಇಸಿಐ ಪ್ರತಿಕ್ರಿಯೆ ದಾಖಲಿಸಲೇಬೇಕು ಮತ್ತು ನಾವು ಅದರ ನಿರ್ಧಾರವನ್ನು ಮುಂದಿನ ಆದೇಶದವರೆಗೆ ತಡೆಹಿಡಿಯುತ್ತೇವೆ ಎಂದಿತು.
“ಈ ವಿಚಾರಕ್ಕೆ ಸಂಬಂಧಿಸಿದಂತೆ ಕಮಲನಾಥ್ ಅವರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಏಕಮುಖವಾಗಿ ಇಸಿಐ ಆದೇಶ ಹೊರಡಿಸಿದೆ” ಎಂದು ಕಮಲನಾಥ್ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.
ನಿರಂತರವಾಗಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ತಮಗೆ ನೀಡಿದ ಎಚ್ಚರಿಕೆಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಮಲನಾಥ್ ಅವರಿಗಿದ್ದ ತಾರಾ ಪ್ರಚಾರಕ ಸ್ಥಾನವನ್ನು ಹಿಂಪಡೆಯಲಾಗಿದೆ ಎಂದು ಇಸಿಐ ತನ್ನ ಆದೇಶದಲ್ಲಿ ಹೇಳಿತ್ತು.
ಕಮಲ್‌ನಾಥ್ ತಮ್ಮ ಅರ್ಜಿಯಲ್ಲಿ “ಬಿಜೆಪಿ ನಾಯಕರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನಿರಂತರವಾಗಿ ನೀಡಿದರೂ ಕ್ರಮಕೈಗೊಳ್ಳಲಾಗಿಲ್ಲ,” ಎಂದಿದ್ದಾರೆ. ಅಲ್ಲದೆ, “ತಾರಾ ಪ್ರಚಾರಕ ಪಟ್ಟಿಯಿಂದ ಅರ್ಜಿದಾರರನ್ನು (ಕಮಲ್‌ನಾಥ್) ಏಕಾಏಕಿ ತೆಗೆಯಲಾಗದು. ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 77(1)ರ ಶಾಸನಬದ್ಧ ಚೌಕಟ್ಟು ಅಂಥ ಅಧಿಕಾರವನ್ನು ಇಸಿಐಗೆ ನೀಡಿಲ್ಲ” ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.