ಮೈಸೂರಿನಲ್ಲಿ ನಾಡಹಬ್ಬ ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ, ವಕೀಲೆ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ರಾಜ್ಯ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ ಎಚ್‌ಎಸ್ ಗೌರವ್ ಮತ್ತು ಕರ್ನಾಟಕ ಸರ್ಕಾರ ಇನ್ನತಿರರ ನಡುವಣ ಪ್ರಕರಣ].
"ದೇಶದ ಸಂವಿಧಾನದ ಪ್ರಸ್ತಾವನೆ ಏನು ಹೇಳುತ್ತದೆ? ಇದು ಸರ್ಕಾರಿ ಕಾರ್ಯಕ್ರಮ, ಯಾರ ಬಗ್ಗೆಯಾದರೂ ಸರ್ಕಾರ ಭೇದ ಮಾಡಲು ಹೇಗೆ ಸಾಧ್ಯ?" ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ನ್ಯಾಯಾಲಯ ಆರಂಭದಲ್ಲಿಯೇ ಅರ್ಜಿ ವಜಾಗೊಳಿಸಿತಾದರೂ, ಅರ್ಜಿದಾರರ ಪರ ವಕೀಲರು, "ಮಂದಿರದ ಒಳಗೆ ಪೂಜೆ ನಡೆಸುವುದು ಒಂದು ಧಾರ್ಮಿಕ ಕ್ರಿಯೆ, ಅದು ಧರ್ಮನಿರಪೇಕ್ಷ ಕಾರ್ಯವಲ್ಲ... ಅದು ಆಚರಣೆಯ ಭಾಗವಾಗಿದೆ. ಈ ಕುರಿತು ಹಲವು ತೀರ್ಪುಗಳಿವೆ. ನಮ್ಮ ಪ್ರಕಾರ ನಮ್ಮ ಧರ್ಮಕ್ಕೆ ವಿರುದ್ಧವಾದ ಹೇಳಿಕೆಗಳನ್ನು (ಬಾನು ಅವರು) ನೀಡಿದ್ದಾರೆ... ಈ ಸಂದರ್ಭಗಳಲ್ಲಿ, ಸರ್ಕಾರ ಅಂತಹ ಜನರನ್ನು ಆಹ್ವಾನಿಸಲಾಗದು. ಇಲ್ಲಿ ಎರಡು ವಿಷಯಗಳಿವೆ – ಒಬ್ಬ ವ್ಯಕ್ತಿ ಧರ್ಮನಿರಪೇಕ್ಷ ವ್ಯಕ್ತಿತ್ವ ಹೊಂದಿರುವುದು. ಮತ್ತೊಬ್ಬ ವ್ಯಕ್ತಿ ನಮ್ಮ ವಿರುದ್ಧ (ಹಿಂದೂಗಳು) ಸಂಪೂರ್ಣ ವಿರುದ್ಧವಾದ ನಿಲುವು ತಳೆಯುವುದು. ಇಂತಹವರನ್ನು ಆಹ್ವಾನಿಸಲಾಗದು" ಎಂದರು.
ಆಗ ಸಿಡಿಮಿಡಿಗೊಂಡ ನ್ಯಾಯಾಲಯ ಈಗಾಗಲೇ ಅರ್ಜಿಯನ್ನು 3 ಬಾರಿ ವಜಾಗೊಳಿಸಲಾಗಿದೆ ಎಂದಿದ್ದೇವೆ. ಇನ್ನೂ ಎಷ್ಟು ಬಾರಿ ಹೇಳಬೇಕು ಎಂದು ಪ್ರಶ್ನಿಸಿತು.
ಬರುವ ಸೋಮವಾರ (ಸೆಪ್ಟೆಂಬರ್ 22) ಕಾರ್ಯಕ್ರಮ ನಡೆಯಲಿರುವುದರಿಂದ ತುರ್ತು ವಿಚಾರಣೆ ಕೋರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರೆದುರು ಪ್ರಕರಣ ಪ್ರಸ್ತಾಪಿಸಲಾಗಿತ್ತು.
ಬಾನು ಅವರು ಈ ಹಿಂದೆ ಹಿಂದೂ ವಿರೋಧಿ ಹೇಳಿಕೆ ನೀಡಿದ್ದರಿಂದ ಅವರು ದಸರಾ ಉದ್ಘಾಟಿಸುವುದು ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ದೂರಿದ್ದ ಅರ್ಜಿಗಳನ್ನು ಸೆಪ್ಟೆಂಬರ್ 15 ರಂದು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಬಾನು ಅವರು ಸಾಧನೆ ಮಾಡಿದ ವ್ಯಕ್ತಿಯಾಗಿದ್ದು ಈ ಪ್ರಕರಣದಲ್ಲಿ ಸಂವಿಧಾನದ 25ನೇ ಮತ್ತು 26ನೇ ವಿಧಿಗಳಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಯಾವುದೇ ಭರವಸೆಗಳು ಉಲ್ಲಂಘನೆಯಾಗಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿತ್ತು.
ಒಂದು ನಿರ್ದಿಷ್ಟ ನಂಬಿಕೆ ಅಥವಾ ಧರ್ಮ ಪಾಲಿಸುವ ವ್ಯಕ್ತಿ ಬೇರೆ ಧರ್ಮದ ಹಬ್ಬಗಳಲ್ಲಿ ಭಾಗವಹಿಸುವುದರಿಂದ ಸಂವಿಧಾನದಡಿಯಲ್ಲಿ ಲಭ್ಯವಿರುವ ಹಕ್ಕು ಉಲ್ಲಂಘನೆಯಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
"ನಮ್ಮ ಅಭಿಪ್ರಾಯದಲ್ಲಿ, ಪ್ರತಿವಾದಿ ಸಂಖ್ಯೆ 4 (ಬಾನು) ಅವರಿಗೆ ಆಹ್ವಾನ ನೀಡಿರುವುದು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಯಾವುದೇ ಮೌಲ್ಯಗಳಿಗೆ ಧಕ್ಕೆ ತರುವುದಿಲ್ಲ" ಎಂದು ಅದು ಹೇಳಿತ್ತು.