ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಬಾನು ಈ ಹಿಂದೆ ಹಿಂದೂ ವಿರೋಧಿ ಹೇಳಿಕೆ ನೀಡಿದ್ದರಿಂದ ಅವರು ದಸರಾ ಉದ್ಘಾಟಿಸುವುದು ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ತಿರಸ್ಕರಿಸಿತ್ತು.
Banu Mushtaq, Supreme Court
Banu Mushtaq, Supreme CourtInstagram
Published on

ಮೈಸೂರಿನಲ್ಲಿ ನಾಡಹಬ್ಬ ದಸರಾ  ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ, ವಕೀಲೆ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ರಾಜ್ಯ ಹೈಕೋರ್ಟ್‌ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ಸಮ್ಮತಿ ಸೂಚಿಸಿದೆ.

ಸೆಪ್ಟೆಂಬರ್ 22 ರಂದು ಕಾರ್ಯಕ್ರಮ ನಡೆಯಲಿರುವುದರಿಂದ ತುರ್ತು ವಿಚಾರಣೆ ಕೋರಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರೆದುರು ಪ್ರಕರಣ ಪ್ರಸ್ತಾಪಿಸಿದಾಗ ಶುಕ್ರವಾರ ಆಲಿಸುವುದಾಗಿ ನ್ಯಾಯಾಲಯ ತಿಳಿಸಿತು.

Also Read
ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ: ಪಿಐಎಲ್‌ಗಳನ್ನು ವಜಾಗೊಳಿಸಿದ ಹೈಕೋರ್ಟ್‌; ಪ್ರತಾಪ್‌ ಸಿಂಹಗೆ ಮುಖಭಂಗ

ಬಾನು ಅವರು ಈ ಹಿಂದೆ ಹಿಂದೂ ವಿರೋಧಿ ಹೇಳಿಕೆ ನೀಡಿದ್ದರಿಂದ ಅವರು ದಸರಾ ಉದ್ಘಾಟಿಸುವುದು ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ದೂರಿದ್ದ ಅರ್ಜಿಗಳನ್ನು ಸೆಪ್ಟೆಂಬರ್ 15 ರಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ತಿರಸ್ಕರಿಸಿತ್ತು.

ಬಾನು ಅವರು ಸಾಧನೆ ಮಾಡಿದ ವ್ಯಕ್ತಿಯಾಗಿದ್ದು ಈ ಪ್ರಕರಣದಲ್ಲಿ ಸಂವಿಧಾನದ 25ನೇ ಮತ್ತು 26ನೇ ವಿಧಿಗಳಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಯಾವುದೇ ಭರವಸೆಗಳು ಉಲ್ಲಂಘನೆಯಾಗಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿತ್ತು.

"ನಿರ್ವಿವಾದವಾಗಿ, ರಾಜ್ಯಸರ್ಕಾರ ಪ್ರತಿ ವರ್ಷ ದಸರಾ ಆಯೋಜಿಸುತ್ತಿದ್ದು ಉದ್ಘಾಟನಾ ಸಮಾರಂಭಕ್ಕೆ ಸಾಧನೆಗೈದ ವ್ಯಕ್ತಿಯನ್ನು ಆಹ್ವಾನಿಸಲಾಗುತ್ತದೆ. ಹಿಂದೆ ವಿಜ್ಞಾನಿಗಳು, ಶಿಕ್ಷಣ ತಜ್ಞರು, ಲೇಖಕರು, ಸ್ವಾತಂತ್ರ್ಯ ಹೋರಾಟಗಾರರು ದಸರಾ ಉದ್ಘಾಟಿಸಿದ್ದರು. ಬಾನು ಅವರು ಒಬ್ಬ ಸಾಧನೆಗೈದ ಲೇಖಕಿ ಮತ್ತು 2025ರ ಬುಕರ್ ಪ್ರಶಸ್ತಿ ವಿಜೇತರು ಎನ್ನುವುದು ವಿವಾದರಹಿತ. ಅವರು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತೆಯೂ ಹೌದು. ಅವರು ಹಾಸನ ನಗರ ಪುರಸಭೆಯ ಸದಸ್ಯೆ, ಚಾಮರಾಜೇಂದ್ರ ಆಸ್ಪತ್ರೆಯ ಸಂದರ್ಶಕರ ಮಂಡಳಿಯ ಅಧ್ಯಕ್ಷೆ, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಮತ್ತು ಹಾಸನ ಜಿಲ್ಲಾ ಸಮತಾ ವೇದಿಕೆ ಹಾಗೂ ಮಹಿಳಾ ಅಭಿವೃದ್ಧಿ ವೇದಿಕೆಯ ಅಧ್ಯಕ್ಷೆ ಸೇರಿದಂತೆ ವಿವಿಧ ಸಾರ್ವಜನಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ " ಎಂದು ಪೀಠ ಹೇಳಿತ್ತು.

Also Read
ಕರ್ನಾಟಕದ ಹೆಮ್ಮೆಯ ಲೇಖಕಿ, ವಕೀಲೆ ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿಯ ಗೌರವ

ಒಂದು ನಿರ್ದಿಷ್ಟ ನಂಬಿಕೆ ಅಥವಾ ಧರ್ಮ ಪಾಲಿಸುವ ವ್ಯಕ್ತಿ ಬೇರೆ ಧರ್ಮದ ಹಬ್ಬಗಳಲ್ಲಿ ಭಾಗವಹಿಸುವುದರಿಂದ ಸಂವಿಧಾನದಡಿಯಲ್ಲಿ ಲಭ್ಯವಿರುವ ಹಕ್ಕು ಉಲ್ಲಂಘನೆಯಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

"ನಮ್ಮ ಅಭಿಪ್ರಾಯದಲ್ಲಿ, ಪ್ರತಿವಾದಿ ಸಂಖ್ಯೆ 4 (ಬಾನು) ಅವರಿಗೆ ಆಹ್ವಾನ ನೀಡಿರುವುದು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಯಾವುದೇ ಮೌಲ್ಯಗಳಿಗೆ ಧಕ್ಕೆ ತರುವುದಿಲ್ಲ" ಎಂದು ಅದು ಹೇಳಿತ್ತು.

Kannada Bar & Bench
kannada.barandbench.com