Supreme Court with NEET PG 2024  
ಸುದ್ದಿಗಳು

ನೀಟ್ ಪಿಜಿ 2024 ಪರೀಕ್ಷೆ ಮುಂದೂಡಿಕೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪರೀಕ್ಷೆಗೆ ಒಂದೆರಡು ದಿನ ಇರುವಂತೆ ಅದನ್ನು ಮುಂದೂಡಲು ಆದೇಶಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

Bar & Bench

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಸ್ನಾತಕೋತ್ತರ ಪರೀಕ್ಷೆಯನ್ನು (ನೀಟ್‌ ಪಿಜಿ 2024) ಮುಂದೂಡಬೇಕೆಂದು ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ವಿಶಾಲ್‌ ಸೊರೇನ್‌ ಅಲಿಯಾಸ್‌ ಬಿಶಾಲ್‌ ಸೊರೇನ್‌ ಇನ್ನಿತರರು ಮತ್ತು ರಾಷ್ಟ್ರೀಯ ಪರೀಕ್ಷಾ ಮಂಡಳಿ ಮತ್ತಿತರರ ನಡುವಣ ಪ್ರಕರಣ].

ಪರೀಕ್ಷೆಗೆ ಒಂದೆರಡು ದಿನ ಇರುವಂತೆ ಅದನ್ನು ಮುಂದೂಡಲು ಆದೇಶಿಸಲಾಗದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.

“ಈಗ ನೀಟ್‌ ಪಿಜಿ ಪರೀಕ್ಷೆಯನ್ನು ಮುಂದೂಡುವುದೆ? ಅಂತಹ ಪರೀಕ್ಷೆಯನ್ನು ನಾವು ಹೇಗೆ ಮುಂದೂಡಲು ಸಾಧ್ಯ? ಜನ ಈಗಿನ ದಿನಗಳಲ್ಲಿ ಸುಮ್ಮನೆ ಪರೀಕ್ಷೆ ಮುಂದೂಡಲು ಕೇಳುತ್ತಿದ್ದಾರೆ” ಎಂದಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, "ಬೆಳಿಗ್ಗೆ ಒಂದು ಪರೀಕ್ಷೆ ಮತ್ತು ಮಧ್ಯಾಹ್ನ ಒಂದು ಪರೀಕ್ಷೆ ಇರುವುದರಿಂದ ವೇಳೆ ಬದಲಿಸುವಂತೆ ಮನವಿ ಕೋರಿದೆ ನಂತರ ಅದನ್ನು ಸಾಮನ್ಯೀಕರಿಸಬಹುದಾಗಿದೆ" ಎಂದರು.

2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಇದು ನಾಲ್ಕು ಲಕ್ಷ ಪೋಷಕರಿಗೂ ಸಂಬಂಧಿಸಿದ ವಿಚಾರ. 50 ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯ ಕಾರಣಕ್ಕೆ ಅದನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು.  ಅರ್ಜಿದಾರರ ಕಾರಣಕ್ಕೆ ನಾವು ಹಲವು ಅಭ್ಯರ್ಥಿಗಳ ವೃತ್ತಿ ಜೀವನವನ್ನು ಅಪಾಯಕ್ಕೆ ದೂಡಲಾಗದು. ಇಂತಹ ಅಜಿಗಳ ಹಿಂದೆ ಯಾರಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ಕಿಡಿಕಾರಿತು.

ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಲು ತೊಂದರೆ ಇರುವಂತಹ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದ್ದು ಅವರು ಪರೀಕ್ಷೆಗೆ ಹಾಜರಾಗಲು ಕಷ್ಟವಾಗುತ್ತಿದೆ ಎಂದು ವಿಶಾಲ್‌ ಸೊರೇನ್‌ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಪರೀಕ್ಷಾ ಕೇಂದ್ರಗಳಿರುವ ನಗರಗಳ ಗುರುತಿಸುವಿಕೆ ಕಾರ್ಯ ಜುಲೈ 31ರಂದು ನಡೆದಿತ್ತು. ಇಂದು (ಆಗಸ್ಟ್ 8) ಆ ಕೇಂದ್ರಗಳನ್ನು ಘೋಷಿಸಲಾಗುತ್ತಿದೆ. ಹೀಗಾಗಿ, ಆಗಸ್ಟ್ 11 ರಂದು ನಡೆಯಲಿರುವ ಪರೀಕ್ಷೆಗೆ ಹಾಜರಾಗುವುದಕ್ಕಾಗಿ ಆಯಾ ಕೇಂದ್ರಗಳಿಗೆ ಪ್ರಯಾಣಿಸಲು ಕಡಿಮೆ ಸಮಯಾವಕಾಶ ಇದೆ ಎಂದು ಅರ್ಜಿದಾರರು ದೂರಿದ್ದರು.

ಇದಲ್ಲದೆ, ಪರೀಕ್ಷೆಯನ್ನು ಎರಡು ಬ್ಯಾಚ್‌ಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು ಸಾಮಾನ್ಯೀಕರಣ ಸೂತ್ರವು ಅಭ್ಯರ್ಥಿಗಳಿಗೆ ತಿಳಿದಿಲ್ಲ ಎಂದು ಆಕ್ಷೇಪಿಸಿ ಅರ್ಜಿ ಇತ್ಯರ್ಥವಾಗುವವರೆಗೆ ಪರೀಕ್ಷೆಗೆ ತಡೆ ನೀಡುವಂತೆ ಮನವಿ ಮಾಡಲಾಗಿತ್ತು.

ಮತ್ತೊಂದೆಡೆ ಸಾಮೂಹಿಕ ಪ್ರಶ್ನೆಪತ್ರಿಕೆ ಸೋರಿಕೆ, ವಿವಿಧ ಅಕ್ರಮಗಳಿಂದಾಗಿ ಪ್ರಸಕ್ತ ಸಾಲಿನ ನೀಟ್‌ ಪದವಿ ಪ್ರವೇಶ ಪರೀಕ್ಷೆ (ನೀಟ್‌ ಯುಜಿ 2024) ವಿವಾದದ ಕೇಂದ್ರ ಬಿಂದುವಾಗಿದ್ದನ್ನು ಅದಕ್ಕೆ ಸಂಬಂಧಿಸಿದಂತೆ ವಿವಿಧ ಅರ್ಜಿಗಳು ದೇಶದ ವಿವಿಧ ನ್ಯಾಯಾಲಯಗಳಿಗೆ ಸಲ್ಲಿಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.