AGR, Supreme Court 
ಸುದ್ದಿಗಳು

ಎಜಿಆರ್ ಬಾಕಿ ಮರುಲೆಕ್ಕಾಚಾರ: ಟೆಲಿಕಾಂ ಕಂಪೆನಿಗಳ ಕ್ಯುರೇಟೀವ್ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಎಜಿಆರ್‌ಗೆ ಸಂಬಂಧಿಸಿದಂತೆ ಟೆಲಿಕಾಂ ಇಲಾಖೆಯ ಪರವಾಗಿ ಸುಪ್ರೀಂ ಕೋರ್ಟ್ ಅಕ್ಟೋಬರ್ 2019ರಲ್ಲಿ ನೀಡಿದ ತೀರ್ಪಿನಿಂದಾಗಿ ಟೆಲಿಕಾಂ ಕಂಪನಿಗಳು ಸುಮಾರು ₹ 92,000 ಕೋಟಿಯಷ್ಟು ಬಾಕಿ ಪಾವತಿಸಬೇಕಿದೆ.

Bar & Bench

ಸರ್ವೋಚ್ಚ ನ್ಯಾಯಾಲಯವು 2019ರ ಅಕ್ಟೋಬರ್‌ನಲ್ಲಿ ನೀಡಿದ್ದ ತೀರ್ಪಿನ ಅನುಸಾರ ತಾವು ಪಾವತಿಸಬೇಕಾದ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್‌) ಬಾಕಿಯ ಮರು ಲೆಕ್ಕಾಚಾರ ನಡೆಸುವಂತೆ ಕೋರಿ ವೊಡಾಫೋನ್‌ ಐಡಿಯಾ,  ಭಾರ್ತಿ ಏರ್‌ಟೆಲ್‌, ಮತ್ತಿತರ ಟೆಲಿಕಾಂ ಕಂಪೆನಿಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ವಜಾ ಮಾಡಿದೆ [ವೊಡಾಫೋನ್‌ ಐಡಿಯಾ ಲಿಮಿಟೆಡ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕ್ಯುರೇಟಿವ್ ಅರ್ಜಿಯನ್ನು ಪರಿಗಣಿಸಬಹುದಾದ ಆಧಾರಗಳನ್ನು  ಒದಗಿಸುವ ರೂಪಾ ಅಶೋಕ್ ಹುರ್ರಾ ಮತ್ತು ಅಶೋಕ್ ನಡುವಣ ಪ್ರಕರಣದ ತೀರ್ಪಿನಲ್ಲಿ ಸೂಚಿಸಲಾದ ಮಾನದಂಡದಂತೆ ಟೆಲಿಕಾಂ ಕಂಪನಿಗಳು ವಾದ ಮಂಡಿಸಿಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್‌‌, ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಬಿ ಆರ್‌ ಗವಾಯಿ ಅವರಿದ್ದ ಪೀಠ ಆಗಸ್ಟ್ 30 ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.

ಎಜಿಆರ್‌ಗೆ ಸಂಬಂಧಿಸಿದಂತೆ ಟೆಲಿಕಾಂ ಇಲಾಖೆಯ ಪರವಾಗಿ ಸುಪ್ರೀಂ ಕೋರ್ಟ್ ಅಕ್ಟೋಬರ್ 2019ರಲ್ಲಿ ನೀಡಿದ ತೀರ್ಪಿನಿಂದಾಗಿ ಟೆಲಿಕಾಂ ಕಂಪನಿಗಳು ಸುಮಾರು ₹ 92,000 ಕೋಟಿಯಷ್ಟು ಬಾಕಿ ಪಾವತಿಸಬೇಕಿದೆ. ಅಕ್ಟೋಬರ್ 2019ರ ತೀರ್ಪಿನ ವಿರುದ್ಧ ಕಂಪೆನಿಗಳು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು ಜನವರಿ 2020ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ದೂರಸಂಪರ್ಕ ಇಲಾಖೆಯ ಲೆಕ್ಕಾಚಾರದಂತೆ ವೊಡಾಫೋನ್‌-ಐಡಿಯಾ ₹58,254 ಕೋಟಿ ಪಾವತಿಸಬೇಕಿದ್ದು, ಭಾರ್ತಿ ಏರ್‌ಟೆಲ್‌ ₹43,980 ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗಿದೆ. ಇದೇ ವೇಳೆ, ಸ್ವಯಂ ಲೆಕ್ಕಾಚಾರದ ಅನ್ವಯ ವೊಡಾಫೋನ್‌ ₹21,533 ಕೋಟಿ ಪಾವತಿಸಬೇಕಿತ್ತು. ಆದರೆ ಸ್ವಯಂ ಲೆಕ್ಕಾಚಾರಕ್ಕೆ ಮುಂದಾಗದೆ ಟೆಲಿಕಾಂ ಇಲಾಖೆ ತಿಳಿಸುವಂತೆಯೇ ಮೊತ್ತ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ಬಂಧ ವಿಧಿಸಿತ್ತು.

ಕೇಂದ್ರ ಸರ್ಕಾರಕ್ಕೆ ಎಜಿಆರ್‌ ಬಾಕಿ ಪಾವತಿಸಲು ಟೆಲಿಕಾಂ ಕಂಪೆನಿಗಳಿಗೆ 10 ವರ್ಷಗಳ ಕಾಲಾವಕಾಶ ನೀಡಿದ್ದ ಸುಪ್ರೀಂ ಕೋರ್ಟ್‌ ಪ್ರತಿ ವರ್ಷ ಬಾಕಿ ಮೊತ್ತದ ಶೇ. 10ರಷ್ಟು ಹಣವನ್ನು ಪಾವತಿಸುವಂತೆ ಸೆಪ್ಟೆಂಬರ್ 2020 ರಲ್ಲಿ ಆದೇಶಿಸಿತ್ತು.  

ದೂರಸಂಪರ್ಕ ಇಲಾಖೆಯು ಎಜಿಆರ್‌ ಬಾಕಿ ಲೆಕ್ಕಾಚಾರ ಮಾಡುವಾಗ ಅಂಕಗಣಿತೀಯ ಲೋಪ ಎಸಗಿದೆ. ಇದನ್ನು ಸರಿಪಡಿಸಲು ನ್ಯಾಯಾಲಯ ಅನುಮತಿಸಬೇಕು ಎಂದು ಕಂಪೆನಿಗಳು ಕೋರಿದ್ದವು.

ಅಕ್ಟೋಬರ್ 2019ರ ತೀರ್ಪಿನ ಪ್ರಕಾರ ಪಾವತಿಸಬೇಕಾದ ಎಜಿಆರ್ ಬಾಕಿ ಮೊತ್ತದ ಲೆಕ್ಕಾಚಾರದಲ್ಲಿ ಉಂಟಾಗಿರುವ ಅಂಕಗಣಿತೀಯ ದೋಷ ಸರಿಪಡಿಸಲು ಕೋರಿ ಟೆಲಿಕಾಂ ಕಂಪನಿಗಳಾದ  ಭಾರ್ತಿ ಏರ್‌ಟೆಲ್‌, ವೊಡಾಫೋನ್-ಐಡಿಯಾ  ಹಾಗೂ ಟಾಟಾ  ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಜುಲೈ 23, 2021 ರಂದು ವಜಾಗೊಳಿಸಿತ್ತು.

ಟೆಲಿಕಾಂಗಳು ಮಾಡಿದ ಮನವಿಯು ಮೇಲ್ನೋಟಕ್ಕೆ ನಿರುಪದ್ರವಿಯಾಗಿ ಕಂಡುಬಂದರೂ, ದೋಷಗಳನ್ನು ಸರಿಪಡಿಸುವ ನೆಪದಲ್ಲಿ ಅವರು ಬಾಕಿಗಳ ಮರು ಲೆಕ್ಕಾಚಾರ ಮಾಡುವಂತೆ  ಕೋರಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.

ಇದೀಗ ನ್ಯಾಯಾಲಯ ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸಿದ್ದು ಇದರಿಂದಾಗಿ, ಟೆಲಿಕಾಂ ಕಂಪೆನಿಗಳು ಅಕ್ಟೋಬರ್ 2019ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿಗೆ ಬದ್ಧವಾಗಿರಬೇಕಿದೆ.