ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಬಳಿಕ 'ಶಿವಸೇನೆ' ಪಕ್ಷದ ಹೆಸರು ಹಾಗೂ ಅದರ 'ಬಿಲ್ಲು ಮತ್ತು ಬಾಣ' ಚಿಹ್ನೆ ನೀಡಿಕೆ ವಿಚಾರವಾಗಿ ಉಂಟಾಗಿರುವ ವ್ಯಾಜ್ಯದ ಕುರಿತಾದ ಅರ್ಜಿಯನ್ನು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಪ್ರತಿನಿಧಿಸಿದ್ದ ವಕೀಲ ಅಮಿತ್ ಆನಂದ್ ತಿವಾರಿ ಅವರು ಇಂದು ಬೆಳಗ್ಗೆ ಶಿವಸೇನೆ ಹೆಸರು ಮತ್ತು ಚಿಹ್ನೆಗೆ ಸಂಬಂಧಿಸಿದ ಪ್ರಕರಣವನ್ನು ಪ್ರಸ್ತಾಪಿಸಿದರು.
ಪ್ರಕರಣದ ಶೀಘ್ರ ವಿಚಾರಣೆಗೆ ಒತ್ತಾಯಿಸುವ ಸಂದರ್ಭದಲ್ಲಿ ಅವರು ಮಹಾರಾಷ್ಟ್ರ ರಾಜಕೀಯ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ ಈಗಾಗಲೇ ಈ ವಿಚಾರ ಇದೆ ಎಂದು ಅವರು ವಾದಿಸಿದರು.
ಆದರೂ ಪ್ರಕರಣವನ್ನು 2 ನಿಮಿಷಗಳಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. 370 ನೇ ವಿಧಿ ಕುರಿತ ಪ್ರಕರಣದ ವಿಚಾರಣೆ ಮುಗಿಯಲಿ ನಂತರ ಇದನ್ನು ಪಟ್ಟಿ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
ಸಂವಿಧಾನದ 370 ನೇ ವಿಧಿ ರದ್ದತಿ ಪ್ರಕರಣದ ವಿಚಾರಣೆ ಬಳಿಕ ಶಿವಸೇನೆಯ ಹೆಸರು ಮತ್ತು ಚಿಹ್ನೆಯ ಕುರಿತಾಗಿ ಉಂಟಾಗಿರುವ ವ್ಯಾಜ್ಯ ಪ್ರಕರಣ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿದೆ.