ಶಿವಸೇನೆ ಹೆಸರು, ಚಿಹ್ನೆ ವಿವಾದ: ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಉದ್ಧವ್ ಬಣ

ತುರ್ತಾಗಿ ಪ್ರಕರಣದ ವಿಚಾರಣೆಗೆ ಇಂದು ಕೋರಲಾಯಿತಾದರೂ ಸಿಜೆಐ ಅವರು ಪ್ರಕರಣ ಇಂದಿನ ಉಲ್ಲೇಖಿತ ಪಟ್ಟಿಯ ಭಾಗವಾಗಿಲ್ಲ ಎಂದು ತಿಳಿಸಿ ಯಾವುದೇ ಸೂಚನೆ ನೀಡಲು ನಿರಾಕರಿಸಿದರು.
Eknath Shinde, Uddhav Thackeray and Shiv Sena party
Eknath Shinde, Uddhav Thackeray and Shiv Sena party
Published on

ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಗುರುತಿಸಿ, ಪಕ್ಷದ ಹೆಸರು, ಜೊತೆಗೆ ಬಿಲ್ಲು- ಬಾಣದ ಚಿಹ್ನೆಯನ್ನು ಬಳಸಲು ಅನುಮತಿ ನೀಡಿರುವ ಭಾರತೀಯ ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.  

ತುರ್ತಾಗಿ ಪ್ರಕರಣದ ವಿಚಾರಣೆ ನಡೆಸುವಂತೆ ಉದ್ಧವ್‌ ಠಾಕ್ರೆ ಬಣದ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರನ್ನು ಕೋರಿದರು. ಆದರೆ ಸಿಜೆಐ ಅವರು ಪ್ರಕರಣ ಇಂದಿನ ಉಲ್ಲೇಖಿತ ಪಟ್ಟಿಯ ಭಾಗವಾಗಿಲ್ಲ ಎಂದು ತಿಳಿಸಿ ಯಾವುದೇ ಸೂಚನೆ ನೀಡಲು ನಿರಾಕರಿಸಿದರು. ನಾಳೆ ಪ್ರಕರಣವನ್ನು ಉಲ್ಲೇಖಿಸಲು ಸೂಚಿಸಿದರು.

Also Read
ಮರುಪರಿಶೀಲನೆಗಾಗಿ ನಬಮ್ ರೆಬಿಯಾ ಪ್ರಕರಣ ವಿಸ್ತೃತ ಪೀಠಕ್ಕೆ: ವಿಚಾರಣಾರ್ಹತೆಯೊಂದಿಗೆ ನಿರ್ಧರಿಸಲಾಗುವುದು ಎಂದ ಸುಪ್ರೀಂ

ಫೆಬ್ರವರಿ 17ರ ಆದೇಶದಲ್ಲಿ ಚುನಾವಣಾ ಆಯೋಗ ಈ ಕೆಳಗಿನ ಸೂಚನೆಗಳನ್ನು ನೀಡಿತ್ತು:

- ಅರ್ಜಿದಾರರ (ಏಕನಾಥ್‌ ಶಿಂಧೆ) ಬಣಕ್ಕೆ ಪಕ್ಷದ ಹೆಸರಾದ ಶಿವಸೇನೆ ಮತ್ತು ಬಿಲ್ಲು-ಬಾಣ ಸೇರಿದೆ.

- 2022ರ ಅಕ್ಟೋಬರ್‌ 11ರಂದು ಮಧ್ಯಂತರ ಆದೇಶದ ಭಾಗವಾಗಿ ಬಾಳಾಸಾಹೇಬಾಂಚಿ ಶಿವಸೇನ ಹೆಸರು ಮತ್ತು ಎರಡು ಖಡ್ಗ ಮತ್ತು ಗುರಾಣಿಯ ಚಿಹ್ನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.

- ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್‌ 29 ಎಗೆ ಅನುಗುಣವಾಗಿ 2018ರ ಪಕ್ಷದ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು. ಆಂತರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ರಾಜಕೀಯ ಪಕ್ಷಗಳ ನೋಂದಣಿಯ ಕುರಿತು ಆಯೋಗ ಹೊರಡಿಸಿದ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪಕ್ಷದ ಸಂವಿಧಾನವಿರಬೇಕು ಎಂದಿತ್ತು.

- 2022ರ ಅಕ್ಟೋಬರ್‌ 10ರಂದು ಮಧ್ಯಂತರ ಆದೇಶದ ಮೂಲಕ ಉದ್ಧವ್‌ ಠಾಕ್ರೆ ಬಣಕ್ಕೆ ಹಂಚಿಕೆ ಮಾಡಲಾಗಿರುವ ಶಿವಸೇನೆ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಹೆಸರು ಮತ್ತು ಉರಿಯುವ ಜ್ಯೋತಿಯನ್ನು ಚಿಂಚವಾಡ ಮತ್ತು ಕಸಬಾ ಪೇಟ್‌ ವಿಧಾನಸಭಾ ಉಪ ಚುನಾವಣೆವರೆಗೆ ಬಳಕೆ ಮಾಡಲು ನಿರ್ದೇಶಿಸಲಾಗಿದೆ.

Also Read
ಮಹಾರಾಷ್ಟ್ರ ರಾಜಕೀಯ: ನಬಮ್ ರೆಬಿಯಾ ಪ್ರಕರಣ ತೀರ್ಪು ಮರುಪರಿಶೀಲನೆ ಅಗತ್ಯತೆ ಕುರಿತ ತೀರ್ಪು ಕಾಯ್ದಿರಿಸಿದ ಸುಪ್ರೀಂ

ನೈಜ ಶಿವಸೇನೆಯನ್ನು ಗುರುತಿಸಲು ತಾನು ಪಕ್ಷದ ಸಂಘಟನಾ ವಿಭಾಗದ ಆಧಾರದಲ್ಲಿ ಅಲ್ಲದೆ ಸದನದಲ್ಲಿನ ಸಂಖ್ಯಾ ಬಲವನ್ನು ಆಧರಿಸಿದ್ದಾಗಿ ಚುನಾವಣಾ ಆಯೋಗ ಹೇಳಿತ್ತು. ಎರಡೂ ಬಣಗಳಿಂದ ಸಂಘಟನಾತ್ಮಕ ವಿಭಾಗದಲ್ಲಿ ಸಂಖ್ಯಾತ್ಮಕ ಬಹುಮತದ ಹಕ್ಕುಗಳು ತೃಪ್ತಿಕರವಾಗಿಲ್ಲ ಎಂದು ಇಸಿಐ ಒತ್ತಿಹೇಳಿತ್ತು. ಆದ್ದರಿಂದ, ಶಾಸಕಾಂಗ ವಿಭಾಗದಲ್ಲಿನ ಬಹುಮತದ ಪರೀಕ್ಷೆಯನ್ನು ಅವಲಂಬಿಸಿರುವುದಾಗಿ ತಿಳಿಸಿತ್ತು.

ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆಗೆ ಕಾರಣವಾಗಿದ್ದ 2022 ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಎರಡೂ ಬಣಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ರಾಜ್ಯಪಾಲರು ಮತ್ತು ವಿಧಾನಸಭೆಯ ಸ್ಪೀಕರ್ ಅವರ ಅಧಿಕಾರ  ಮತ್ತು ಶಾಸಕರ ವಿರುದ್ಧದ ಅನರ್ಹತೆಯ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸ್ಪೀಕರ್‌ಗೆ ಇರುವ ಪಾತ್ರದ ವ್ಯಾಪ್ತಿ ಸೇರಿದಂತೆ ವಿವಿಧ ವಿಷಯಗಳನ್ನು ಪರಿಗಣಿಸುತ್ತಿದೆ.

Kannada Bar & Bench
kannada.barandbench.com