ಸುದ್ದಿಗಳು

ಕೇಂದ್ರ ಹಾಗೂ ಕರ್ನಾಟಕ ಸಹಿತ ವಿವಿಧ ರಾಜ್ಯ ಮಾಹಿತಿ ಆಯೋಗಗಳ ಹುದ್ದೆ ಭರ್ತಿಗೆ ಗಡುವು ವಿಧಿಸಲು ಸುಪ್ರೀಂ ಆದೇಶ

ರಾಜ್ಯ ಮಾಹಿತಿ ಆಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿಯಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.

Bar & Bench

ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಮಾಹಿತಿ ಆಯೋಗಗಳಲ್ಲಿ (ಎಸ್‌ಐಸಿ) ಬಾಕಿ ಇರುವ ಹುದ್ದೆಗಳನ್ನು ಭರ್ತಿಗೆ ಗಡುವು ವಿಧಿಸುವಂತೆ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ [ಅಂಜಲಿ ಭಾರದ್ವಾಜ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ] .

ಎರಡು ವಾರಗಳಲ್ಲಿ ಈ ಸಂಬಂಧ ಮಾಹಿತಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್‌ ಕೆ ಸಿಂಗ್ ಅವರಿದ್ದ ಪೀಠ ತಿಳಿಸಿದೆ.

ಎಷ್ಟು ದಿನದೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಮತ್ತು ಎಷ್ಟು ದಿನದೊಳಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬ ಬಗ್ಗೆ ಡಿಒಪಿಟಿ ಕಾರ್ಯದರ್ಶಿಗಳಿಗೆ ಅಫಿಡವಿಟ್‌ ಸಲ್ಲಿಸಲು ನಿರ್ದೇಶಿಸುತ್ತಿದ್ದೇವೆ.  ಅಂಜಲಿ ಭಾರದ್ವಾಜ್ ಪ್ರಕರಣದ ತೀರ್ಪಿನಂತೆ ಪಟ್ಟಿ ಕುರಿತೂ ಅಧಿಸೂಚನೆ ಹೊರಡಿಸಲಿ. ಈ ಸಂಬಂಧ ಎರಡು ವಾರದೊಳಗೆ ಅಫಿಡವಿಟ್‌ ಸಲ್ಲಿಸಬೇಕು ಎಂದು ನ್ಯಾಯಾಲಯ ವಿವರಿಸಿದೆ.

ರಾಜ್ಯ ಮಾಹಿತಿ ಆಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿಯಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು. ವಿವಿಧ ರಾಜ್ಯ ಸರ್ಕಾರಗಳು ಮಾಹಿತಿ ಆಯೋಗದ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ  ಪ್ರಾರಂಭಿಸಿದ್ದರೂ, ಆಯ್ಕೆ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದರ ಕುರಿತು ಖಚಿತವಾದ ಮಾಹಿತಿಯಿಲ್ಲ ಎಂಬ ವಿಚಾರ ಗಮನಿಸಿದ ಪೀಠ ವಿವಿಧ ನಿರ್ದೇಶನಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಿತು.

ಅಭ್ಯರ್ಥಿಗಳ ಪಟ್ಟಿಯನ್ನು ಒಂದು ವಾರದಲ್ಲಿ ಪ್ರಕಟಿಸಬೇಕು. ಶೋಧನಾ ಸಮಿತಿಯನ್ನು ಸಹ ಒಂದು ವಾರದಲ್ಲಿ ರಚಿಸಿ ಪ್ರಕಟಿಸಬೇಕು. ಸಂದರ್ಶನಗಳನ್ನು ಪೂರೈಸಲು ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಬೇಕು. ಇದು ಗರಿಷ್ಠ ಎರಡು ವಾರವನ್ನು ಮೀರಬಾರದು. ತದನಂತರ ಸಕ್ಷಮ ಪ್ರಾಧಿಕಾರವು ಆಯ್ಕೆಯಾದ ಸದಸ್ಯರನ್ನು ಎರಡು ವಾರಗಳೊಳಗೆ ನೇಮಿಸಬೇಕು ಎಂದು ಅದು ಸೂಚಿಸಿದೆ.

ತನ್ನ ನಿರ್ದೇಶನಗಳ ಅನುಪಾಲನೆ ಸಂಬಂಧ ಅಫಿಡವಿಟ್‌ ಸಲ್ಲಿಸುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಅದು ಆದೇಶಿಸಿತು. ಪ್ರಸ್ತುತ ಎಷ್ಟು ಖಾಲಿ ಹುದ್ದೆಗಳಿವೆ ಎಂಬುದರ ಕುರಿತು ಮುಖ್ಯ ಕಾರ್ಯದರ್ಶಿಗಳು ಕೂಡ ತಿಳಿಸಲಿ" ಎಂದು ನ್ಯಾಯಾಲಯ ತಿಳಿಸಿತು.

ಸಿಐಸಿ ಹಾಗೂ ಎಸ್‌ಐಸಿಗಳಲ್ಲಿ ವಿವಿಧ ಹುದ್ದೆಗಳು ಖಾಲಿ ಇರುವುದನ್ನು ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ  (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಈ ಹಿಂದೆ ನ್ಯಾಯಾಲಯ ಖಾಲಿ ಹುದ್ದೆ ಭರ್ತಿಗೆ ವಿವಿಧ ನಿರ್ದೇಶನಗಳನ್ನು ನೀಡಿತ್ತು.

ಇದೇ ಅರ್ಜಿದಾರೆ 2023 ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ನಿರಂತರವಾಗಿ ಹುದ್ದೆಗಳು ಖಾಲಿ ಇರುವುದು ಮಾಹಿತಿ ಹಕ್ಕು ಕಾಯಿದೆಯ (ಆರ್‌ಟಿಐ ಕಾಯಿದೆಯ) ಉದ್ದೇಶವನ್ನು ಮಣಿಸುತ್ತದೆ ಎಂದು ಟೀಕಿಸಿತ್ತು.

ನವೆಂಬರ್ 2024 ರಲ್ಲಿ ನಡೆದ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕದಲ್ಲಿ ಎಂಟು, ಮಹಾರಾಷ್ಟ್ರದಲ್ಲಿ ಏಳು, ಒಡಿಶಾದಲ್ಲಿ ಐದು, ಪಶ್ಚಿಮ ಬಂಗಾಳದಲ್ಲಿ ನಾಲ್ಕು, ತಮಿಳುನಾಡು ಮತ್ತು ಛತ್ತೀಸ್‌ಗಢದಲ್ಲಿ ತಲಾ ಎರಡು, ಬಿಹಾರದಲ್ಲಿ ಒಂದು ಹುದ್ದೆ ಖಾಲಿ ಇವೆ. ಅಲ್ಲದೆ ಯಾವುದೇ ಹೊಸ ನೇಮಕಾತಿ ನಡೆಯದೆ ಇರುವುದರಿಂದ ಜಾರ್ಖಂಡ್, ತೆಲಂಗಾಣ ಮತ್ತು ತ್ರಿಪುರಾ ರಾಜ್ಯಗಳಲ್ಲಿ, ರಾಜ್ಯ ಮಾಹಿತಿ ಆಯೋಗಗಳು ಕಳೆದ ಅನೇಕ ವರ್ಷಗಳಿಂದ ನಿಷ್ಕ್ರಿಯವಾಗಿವೆ ಎಂದು ಅದು ಬೇಸರ ವ್ಯಕ್ತಪಡಿಸಿತ್ತು.

ಇಂದಿನ ವಿಚಾರಣೆ ವೇಳೆ ಇದೇ ಕಳವಳವನ್ನು ಅರ್ಜಿದಾರರ ಪರ ವಕೀಲ ಪ್ರಶಾಂತ್‌ ಭೂಷಣ್‌ ಪುನರುಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಎಷ್ಟು ದಿನದೊಳಗೆ ಹುದ್ದೆ ಭರ್ತಿ ಮಾಡಲಾಗುವುದು ಎಂಬ ಮಾಹಿತಿಯನ್ನು ಮತ್ತೊಮ್ಮೆ ಪಡೆಯಲು ನ್ಯಾಯಾಲಯ ನಿರ್ಧರಿಸಿತು.