ಕೇಂದ್ರ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಮಾಹಿತಿ ಆಯೋಗಗಳ ಖಾಲಿ ಹುದ್ದೆ ಭರ್ತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ನವೆಂಬರ್ 11 ರಂದು ನೀಡಲಾದ ಮಾಹಿತಿಯ ಪ್ರಕಾರ, ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗಗಳಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Supreme Court, RTI
Supreme Court, RTI
Published on

ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಮಾಹಿತಿ ಆಯೋಗಗಳಲ್ಲಿ (ಎಸ್‌ಐಸಿ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ [ ಅಂಜಲಿ ಭಾರದ್ವಾಜ್ ಇನ್ನಿತರರು ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ನವೆಂಬರ್ 11 ರಂದು ನೀಡಲಾದ ಮಾಹಿತಿಯ ಪ್ರಕಾರ, ಕೇಂದ್ರ ಮಾಹಿತಿ ಆಯೋಗದಲ್ಲಿ ಎಂಟು ಹುದ್ದೆಗಳು ಖಾಲಿ ಇದ್ದು ಪ್ರಸ್ತುತ ಕೇವಲ ಮೂವರು ಮಾಹಿತಿ ಆಯುಕ್ತರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿದೆ.

Also Read
ಇವಿಎಂ ಕುರಿತಾದ ಆರ್‌ಟಿಐ ಅರ್ಜಿಗೆ ವರ್ಷದಿಂದ ದೊರೆಯದ ಉತ್ತರ: ಚುನಾವಣಾ ಆಯೋಗಕ್ಕೆ ಸಿಐಸಿ ತರಾಟೆ

ಈ ಸಂಬಂಧ ಎರಡು ವಾರಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸಬೇಕು. ಅದರಲ್ಲಿಯೂ ಸಿಐಸಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತೆಗೆದುಕೊಂಡ ಕ್ರಮವನ್ನು ವಿವರಿಸಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಬ್ರಿಜೆಂದರ್ ಚಹರ್ ಅವರಿಗೆ ಅದು ಹೇಳಿತು.

ಇದಲ್ಲದೆ ವಿವಿಧ ರಾಜ್ಯ ಮಾಹಿತಿ ಆಯೋಗಗಳಲ್ಲಿ ಹುದ್ದೆಗಳು ಖಾಲಿ ಇರುವುದನ್ನು ಸಹ ನ್ಯಾಯಾಲಯವು ಗಮನಿಸಿತು. ಕರ್ನಾಟಕದಲ್ಲಿ ಎಂಟು, ಮಹಾರಾಷ್ಟ್ರದಲ್ಲಿ ಏಳು, ಒಡಿಶಾದಲ್ಲಿ ಐದು, ಪಶ್ಚಿಮ ಬಂಗಾಳದಲ್ಲಿ ನಾಲ್ಕು, ತಮಿಳುನಾಡು ಮತ್ತು ಛತ್ತೀಸ್‌ಗಢದಲ್ಲಿ ತಲಾ ಎರಡು, ಬಿಹಾರದಲ್ಲಿ ಒಂದು ಹುದ್ದೆ ಖಾಲಿ ಇವೆ ಎಂದು ಅದು ವಿವರಿಸಿತು.

ಅಲ್ಲದೆ ಯಾವುದೇ ಹೊಸ ನೇಮಕಾತಿ ನಡೆಯದೆ ಇರುವುದರಿಂದ ಜಾರ್ಖಂಡ್, ತೆಲಂಗಾಣ ಮತ್ತು ತ್ರಿಪುರಾ ರಾಜ್ಯಗಳಲ್ಲಿ, ರಾಜ್ಯ ಮಾಹಿತಿ ಆಯೋಗಗಳು ಕಳೆದ ಅನೇಕ ವರ್ಷಗಳಿಂದ ನಿಷ್ಕ್ರಿಯವಾಗಿವೆ ಎಂದು ಅದು ಬೇಸರ ವ್ಯಕ್ತಪಡಿಸಿತು.

ಹೀಗಾಗಿ, ಖಾಲಿ ಇರುವ ಹುದ್ದೆಗಳ ನೇಮಕಾತಿ ಎಷ್ಟು ಬೇಗನೆ ನಡೆಯುತ್ತದೆ ಎಂಬ ಕುರಿತು ನ್ಯಾಯಾಲಯಕ್ಕೆ ವಿವರವಾದ ಸ್ಥಿತಿಗತಿ ವರದಿಯನ್ನು ಎರಡು ವಾರಗಳ ಅವಧಿಯಲ್ಲಿ ಸಲ್ಲಿಸುವಂತೆ ಅದು ಸಂಬಂಧಪಟ್ಟ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಇದಲ್ಲದೆ, ದೇಶದ ಉಳಿದ ಎಲ್ಲಾ ರಾಜ್ಯ ಸರ್ಕಾರಗಳ ರಾಜ್ಯ ಮಾಹಿತಿ ಆಯೋಗಗಳಲ್ಲಿ ಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆ ಮತ್ತು ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ವಿವರಿಸುವ ವರದಿ ಸಲ್ಲಿಸುವಂತೆಯೂ ಅದು ತಿಳಿಸಿದೆ.  

Also Read
ಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ಒದಗಿಸಲು ಸೂಚಿಸಿದ್ದ ಸಿಐಸಿ ಆದೇಶ ವಜಾಗೊಳಿಸಿದ ಗುಜರಾತ್ ಹೈಕೋರ್ಟ್; ಕೇಜ್ರಿಗೆ ದಂಡ

ಸಿಐಸಿ ಹಾಗೂ ಎಸ್‌ಐಸಿಗಳಲ್ಲಿ ವಿವಿಧ ಹುದ್ದೆಗಳು ಖಾಲಿ ಇರುವುದನ್ನು ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನವೆಂಬರ್ 26ರಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.

ಅರ್ಜಿದಾರರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಇನ್ನಿತರರು ವಾದ ಮಂಡಿಸಿದರು. ಪ್ರತಿವಾದಿಗಳನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಬ್ರಿಜೆಂದರ್ ಚಹರ್ , ಹಿರಿಯ ವಕೀಲ ಅರುಣಾಭ್ ಚೌಧರಿ ಮತ್ತಿತರರು ಪ್ರತಿನಿಧಿಸಿದ್ದರು. ಡಿಸೆಂಬರ್ 17ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com