Justices L Nageswara Rao, Hemant Gupta and Ajay Rastogi
Justices L Nageswara Rao, Hemant Gupta and Ajay Rastogi  
ಸುದ್ದಿಗಳು

ಐದು ವರ್ಷಕ್ಕಿಂತ ಹೆಚ್ಚು ಶಿಕ್ಷೆಯ ಆರೋಪಪಟ್ಟಿ ಸಲ್ಲಿಕೆಯಾದ ಜನಪ್ರತಿನಿಧಿಗಳ ಅನರ್ಹತೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ

Bar & Bench

ಅಪರಾಧ ಎಸಗಿದ ಜನಪ್ರತಿನಿಧಿಯೊಬ್ಬರ ವಿರುದ್ಧ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸುವಂತೆ ಆರೋಪಪಟ್ಟಿ ಸಲ್ಲಿಸಲಾಗಿದ್ದರೆ ಅಂತಹವರ ಚುನಾವಣೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಅರ್ಜಿದಾರರ ವಾದವನ್ನು ನ್ಯಾಯಮೂರ್ತಿ ಎಲ್‌ ನಾಗೇಶ್ವರ ರಾವ್‌ ನೇತೃತ್ವದ ತ್ರಿಸದಸ್ಯ ಪೀಠ ಮನ್ನಿಸಿದರೂ ಮನವಿ ನ್ಯಾಯಿಕ ವ್ಯಾಪ್ತಿ ಮೀರಿದ್ದು 1951ರ ಜನ ಪ್ರತಿನಿಧಿ ಕಾಯಿದೆಗೆ ತಿದ್ದುಪಡಿ ತರಬೇಕಿರುವುದರಿಂದ ಇದು ಶಾಸಕಾಂಗದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅಭಿಪ್ರಾಯಪಟ್ಟಿತು.

ರಾಜಕೀಯ ಜೀವನ ಮತ್ತು ಚುನಾವಣಾ ಪ್ರಕ್ರಿಯೆ ಅಪರಾಧೀಕರಣದಿಂದ ಮುಕ್ತವಾಗಿರಬೇಕು ಎಂದು ಆದೇಶಿಸಿ 1997ರಲ್ಲಿ ಸಂಸತ್ತು ಅಂಗೀಕರಿಸಿದ ಸರ್ವಾನುಮತದ ನಿರ್ಣಯವನ್ನು ಕಾಲಮಿತಿಯೊಳಗೆ ಮತ್ತು ಅರ್ಥಪೂರ್ಣವಾಗಿ ಜಾರಿಗೊಳಿಸುವಂತೆ ʼಲೋಕ್ ಪ್ರಹರಿʼ ಎಂಬ ಸರ್ಕಾರೇತರ ಸಂಸ್ಥೆ ಕೋರಿತ್ತು. ಕಳೆದ 23 ವರ್ಷಗಳಿಂದಲೂ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿರುವ ಕಾರಣಕ್ಕಾಗಿ, ಚುನಾವಣಾ ರಾಜಕೀಯದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ರೂಪಿಸಲಾದ 142 ನೇ ವಿಧಿಯಡಿ ಸುಪ್ರೀಂ ಕೋರ್ಟ್ ಅಧಿಕಾರ ಚಲಾಯಿಸುವುದು ಈಗ ಉಳಿದ ಏಕೈಕ ಮಾರ್ಗವಾಗಿದೆ ಎಂದು ಸರ್ಕಾರೇತರ ಸಂಸ್ಥೆ ಪರವಾಗಿ ಆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್ ಎನ್ ಶುಕ್ಲಾ ಮನವಿ ಮಾಡಿದ್ದರು.

ಆದರೆ, ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಅಜಯ್ ರಾಸ್ತೋಗಿ ಅವರಿದ್ದ ಪೀಠ ಸಮಸ್ಯೆ ಪರಿಹರಿಸಲು ಜನ ಪ್ರತಿನಿಧಿ ಕಾಯಿದೆಗೆ ತಿದ್ದುಪಡಿ ತರುವುದು ಸಂಸತ್ತಿನ ಕಾರ್ಯ ಎಂದು ಹೇಳಿದೆ. ಶಾಸಕಾಂಗ ಕ್ಷೇತ್ರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ವಿವೇಕಯುತವಲ್ಲ ಎಂದು ನ್ಯಾಯಪೀಠ ಹೇಳಿದೆ.

"ನ್ಯಾಯಮೂರ್ತಿ ಆರ್ ಎಂ ಲೋಧಾ ಅವರು 2014 ರಲ್ಲಿ ನೀಡಿದ ಆದೇಶದಲ್ಲಿ ಇಂಥದ್ದೇ ಪ್ರಶ್ನೆಯನ್ನು ಕಾನೂನು ಆಯೋಗದ ಮುಂದಿಡಲಾಯಿತು.. ಆರೋಪ ನಿಗದಿಯಾದ ನಂತರ ವ್ಯಕ್ತಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಕಾನೂನು ಆಯೋಗ ಹೇಳುತ್ತದೆ. ನಾವು ಈ ಬಗ್ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಆದರೆ ಸಂಸತ್ತು ಈ ಕರೆಗೆ ಓಗೊಡಬೇಕಿದೆ" ಎಂದು ನ್ಯಾ. ನಾಗೇಶ್ವರ ರಾವ್‌ ಅಭಿಪ್ರಾಯಪಟ್ಟರು.

ಇದೇ ವೇಳೆ ಶುಕ್ಲಾ ಅವರು ʼಅಪರಾಧದ ಹಿನ್ನೆಲೆಯಿರುವವರು ಚುನಾವಣೆಯಲ್ಲಿ ಪಾಲ್ಗೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆʼ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದ ನ್ಯಾಯಾಲಯ ʼಅರ್ಜಿಯಲ್ಲಿ ಉಲ್ಲೇಖಿಸಲಾದ ಪರಿಹಾರವನ್ನು ಈ ನ್ಯಾಯಾಲಯದಿಂದ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ನ್ಯಾಯಾಲಯ ಹೊರಡಿಸಿದ ನಿರ್ದೇಶನಗಳನ್ನು ಜಾರಿಗೆ ತರುವ ಸಂಬಂಧ ಯಾವುದೇ ಪರಿಹಾರ ಕೋರುವುದನ್ನು ನಾವು ಅರ್ಜಿದಾರರಿಗೆ ಮುಕ್ತವಾಗಿ ಬಿಡುತ್ತೇವೆ” ಎಂದು ಹೇಳಿದರು.