ಶಾಸಕರು, ಸಚಿವರ ವಿರುದ್ಧದ 570 ಕ್ರಿಮಿನಲ್ ಪ್ರಕರಣ ಹಿಂಪಡೆದ ಸರ್ಕಾರ: ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

2014ಕ್ಕೂ ಮುನ್ನ ಮತ್ತು 2020ರ ಮೇ ನಂತರ ಜನಪ್ರತಿನಿಧಿಗಳ ವಿರುದ್ಧವಿದ್ದ ಹಿಂಪಡೆದಿರುವ ಕ್ರಿಮಿನಲ್‌ ಪ್ರಕರಣಗಳ ಬಗ್ಗೆ ಮಾಹಿತಿ ಹಕ್ಕು ಕಾಯಿದೆ ಅಡಿ ಸಲ್ಲಿಸಲಾಗಿದ್ದ ಮನವಿಗೆ ರಾಜ್ಯ ಸರ್ಕಾರ ಮಾಹಿತಿ ನೀಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
High Court of Karnataka
High Court of Karnataka
Published on

ರಾಜ್ಯದ ವಿವಿಧ ಶಾಸಕರು ಹಾಗೂ ಮಂತ್ರಿಗಳ ವಿರುದ್ಧದ ದಾಖಲಾಗಿದ್ದ 570 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದಿರುವ ಸಂಪುಟದ ನಿರ್ಧಾರ ಹಾಗೂ ಸರ್ಕಾರದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

2014 ರಿಂದ 2020ರ ಮೇ ವರೆಗಿನ ಎಲ್ಲಾ ಆದೇಶಗಳನ್ನು ವಜಾ ಮಾಡುವಂತೆ ಕೋರಿ ಅರ್ಜಿದಾರರಾದ ವಕೀಲೆ ಸುಧಾ ಕತ್ವಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಪ್ರಾಸಿಕ್ಯೂಷನ್‌ ಮಹಾನಿರ್ದೇಶಕರಿಗೆ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 10ಕ್ಕೆ ನಿಗದಿ ಮಾಡಿದೆ.

2014ರಿಂದ ಕ್ರಿಮಿನಲ್‌ ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 321ರ ಅಡಿ ಸಂಪುಟ ನಿರ್ಧಾರದ ಮೂಲಕ ವಿವಿಧ ಶಾಸಕರು, ಸಚಿವರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ 570 ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಅನುಮತಿಸಿದೆ ಎಂದು ಅರ್ಜಿದಾರರ ಪರ ವಕೀಲರಾದ ಎಸ್‌ ಉಮಾಪತಿ ನ್ಯಾಯಪೀಠಕ್ಕೆ ವಿವರಿಸಿದ್ದಾರೆ.

ಅರ್ಜಿಯಲ್ಲಿ ಸಲ್ಲಿಸಲಾದ ಆದೇಶಗಳು ಸಮಗ್ರವಾಗಿಲ್ಲ. ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಅಡಿ ಕೇಳಲಾದ ಮಾಹಿತಿಗೆ 2014ಕ್ಕೂ ಮುನ್ನ ಮತ್ತು 2020ರ ಮೇ ನಂತರ ಜನಪ್ರತಿನಿಧಿಗಳ ವಿರುದ್ಧವಿದ್ದ ಹಿಂಪಡೆದಿರುವ ಕ್ರಿಮಿನಲ್‌ ಪ್ರಕರಣಗಳ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕ್ರಿಮಿನಲ್‌ ನ್ಯಾಯದಾನ ವ್ಯವಸ್ಥೆಯಿಂದ ಆರೋಪಿಗಳಿಗೆ ಪೂರ್ವಾನ್ವಯವಾಗುವ ವಿನಾಯಿತಿ ನೀಡುವ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಇದು ಕಾನೂನಿನ ಅಲಕ್ಷ್ಯವಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಸಿಆರ್‌ಪಿಸಿಯ ಸೆಕ್ಷನ್‌ 321 ಅನ್ನು (ಪ್ರಾಸಿಕ್ಯೂಷನ್‌ನಿಂದ ಹಿಂಪಡೆಯುವುದು) ಚಲಾಯಿಸುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿರುವ ಸರ್ಕಾರದ ಆದೇಶವು “ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಅಧಿಕಾರದ ಸ್ಪಷ್ಟ ದುರ್ಬಳಕೆಯಾಗಿದೆ” ಎಂದು ಮನವಿದಾರರು ವಾದಿಸಿದ್ದಾರೆ.

“ಸಾಮಾನ್ಯರು ಮತ್ತು ಬಡವರು ಸಣ್ಣ ಅಪರಾಧಗಳಿಗೂ ಕಠಿಣವಾದ ಕ್ರಿಮಿನಲ್‌ ವಿಚಾರಣೆ ಎದುರಿಸಬೇಕಿದೆ. ಆದರೆ, ಸಿಆರ್‌ಪಿಸಿಯ ಸೆಕ್ಷನ್‌ 321ರ ಅಡಿ ಅಧಿಕಾರ ಚಲಾಯಿಸುವ ಮೂಲಕ ಗಂಭೀರ ಆರೋಪಗಳನ್ನು ಎದುರಿಸುತ್ತಿರುವವರನ್ನು ಯಾವುದೇ ತೆರನಾದ ಶಿಕ್ಷೆಯಿಲ್ಲದೇ ಪ್ರಕರಣಗಳಿಂದ ಮುಕ್ತಗೊಳಿಸುವ ಕೆಲಸವನ್ನು ಸರ್ಕಾರ ಮಾಡಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ.
ಮನವಿಯಲ್ಲಿ ಉಲೇಖ
Also Read
ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ: ಪ್ರತ್ಯೇಕ ನ್ಯಾಯಾಲಯದ ಕುರಿತಾಗಿ ಸರ್ಕಾರವನ್ನು ಪ್ರಶ್ನಿಸಿದ ಕರ್ನಾಟಕ ಹೈಕೋರ್ಟ್

ಈ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಸಚಿವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಹೊರಡಿಸಿರುವ ಸರ್ಕಾರ ಹಾಗೂ ಸಂಪುಟದ ನಿರ್ಧಾರಗಳನ್ನು ವಜಾಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ. ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯುವಾಗ ಸಿಆರ್‌ಪಿಸಿ ಸೆಕ್ಷನ್‌ 321 ಅನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶನ ನೀಡುವಂತೆ ಪೀಠವನ್ನು ಕೋರಲಾಗಿದೆ.

Kannada Bar & Bench
kannada.barandbench.com