ನ್ಯಾಯಾಲಯದ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್ ಆಗಿರುವ ದೆಹಲಿ ರಿಜ್ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿದದ್ದಕಾಗಿ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಯಾವ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ವಿವರಿಸುವ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಲೆ. ಗವರ್ನರ್ ವಿ ಕೆ ಸಕ್ಸೇನಾ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ [ಮರ ಕಡಿದ ಘಟನೆಗೆ ಸಂಬಂಧಿಸಿದಂತೆ ದಾಖಲಿಸಿಕೊಳ್ಳಲಾದ ಸ್ವಯಂ ಪ್ರೇರಿತ ಪ್ರಕರಣ].
ಮರಗಳ ಮಾರಣ ಹೋಮಕ್ಕೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಪ್ರದೇಶದ ನೈರ್ಮಲ್ಯ ಕಾಪಾಡುವುದಕ್ಕಾಗಿ ಮರಗಳನ್ನು ರಕ್ಷಿಸುವಂತೆ ತಾನು ಈ ಹಿಂದೆ ಆದೇಶ ನೀಡಿದ್ದರೂ ಮರಗಳನ್ನು ಕಡಿಯಲಾಗಿದೆ ಎಂದಿತು.
ಈ ಆದೇಶ ಉಲ್ಲಂಘನೆಯಾಗಿದ್ದು ಹೇಗೆ ಅದಕ್ಕೆ ಯಾವ ಅಧಿಕಾರಿಗಳು ಹೊಣೆಗಾರರು ಎಂಬ ಕುರಿತು ವಿವರಣೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಡಿಡಿಎ ಅಧ್ಯಕ್ಷರ ಬಳಿ ಇರುವ ಮಾಹಿತಿಯಂತೆ ಡಿಡಿಎ ಅಧ್ಯಕ್ಷರೇ (ದೆಹಲಿ ಲೆ. ಗವರ್ನರ್) ಖುದ್ದು ಅಫಿಡವಿಟ್ ಸಲ್ಲಿಸಲಿ. ಮರಗಳನ್ನು ಹೇಗೆ ಕಡಿಯಲಾಯಿತು ಮತ್ತು ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳನ್ನು ಅರ್ಜಿ ವಿವರಿಸಲಿ. ಮುಂದಿನ ವಿಚಾರಣೆಗೂ ಮುನ್ನ (ಅಕ್ಟೋಬರ್ 22) ಅನುಪಾಲನೆ ಕುರಿತಂತೆ ಅಫಿಡವಿಟ್ ಸಲ್ಲಿಸಬೇಕು ಎಂದು ಅದು ವಿವರಿಸಿತು.
ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮರಗಳನ್ನು ಕಡಿಯಲಾಗಿದೆ ಎಂದು ಲೆ. ಗವರ್ನರ್ ಅವರಿಗೆ ಅರಿವಿದೆಯೇ ತಪ್ಪಿತಸ್ಥ ಡಿಡಿಎ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಇಲ್ಲವೇ ಮತ್ತೆ ಮರ ಕಡಿದದ್ದರಿಂದ ಉಂಟಾದ ಪರಿಸರ ಹಾನಿ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆಯೇ ಎಂಬುದನ್ನು ವಿವರಿಸುವ ಅಗತ್ಯವಿದೆ ಎಂದು ಅದು ಸೂಚಿಸಿದೆ.
“ನ್ಯಾಯಾಲಯಕ್ಕೆ ಮಾಹಿತಿ ನೀಡದೆ ಮರಗಳನ್ನು ಉದ್ದೇಶಪೂರ್ವಕವಾಗಿ ಕಡಿದ ಅಧಿಕಾರಿಗಳನ್ನು ಪತ್ತೆ ಮಾಡಲು ಯಾವ ಕ್ರಮ ಕೈಗೊಳ್ಳಲಾಗಿದೆ? ಏನಾದರೂ ಶಿಸ್ತುಕ್ರಮ ಜರುಗಿಸಲಾಗಿದೆಯೇ? ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಲಾಗಿದೆಯೇ? ನ್ಯಾಯಾಲಯದ ಆದೇಶ ಉಲ್ಲಂಘನೆಗಾಗಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಡಿಡಿಎ ಅಧ್ಯಕ್ಷರು ಹೇಳುವುದಾದರೆ ಅವರು ನ್ಯಾಯಾಲಯದ ನಿರ್ದೇಶನಗಳಿಗೆ ಕಾಯದೆ ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.
ಲೆ. ಗವರ್ನರ್ ಸಕ್ಸೇನಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ , ಪ್ರಕರಣದಲ್ಲಿ ಡಿಡಿಎ ಅಧ್ಯಕ್ಷರೂ ಆದ ಲೆ. ಗವರ್ನರ್ ಅವರ ಪಾತ್ರ ಇಲ್ಲ ಮತ್ತು ದೆಹಲಿಯ ಪರಿಸರ ಮತ್ತು ಅರಣ್ಯ ಇಲಾಖೆ ಆರಂಭಿಸಿದ ಪ್ರಕ್ರಿಯೆಯಲ್ಲಿ ಅವರು ಕೇವಲ ಸಹಿ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಆಗ ಸಿಜೆಐ ಅವರು ಅಫಿಡವಿಟ್‌ನಲ್ಲಿ ನೀಡುವ ಯಾವುದೇ ಹೇಳಿಕೆಗೆ ಲೆ. ಗವರ್ನರ್ ಅವರೇ ಖುದ್ದು ಹೊಣೆಗಾರರಾಗುತ್ತಾರೆ. ಡಿಡಿಎಯ ಉಪಾಧ್ಯಕ್ಷರು ಹೇಳುವುದು ಬೇಕಿಲ್ಲ. ಶಿಸ್ತುಕ್ರಮ, ಕ್ರಿಮಿನಲ್ ಮೊಕದ್ದಮೆ ಹೂಡಿರುವುದು ಮತ್ತು ಹೊಣೆಗಾರರನ್ನಾಗಿ ಮಾಡುವ ಸಂಬಂಧ ಅತ್ಯುನ್ನತ ಹುದ್ದೆಯಲ್ಲಿರುವವರೇ ಮಾಹಿತಿ ನೀಡಬೇಕೆಂದು ಬಯಸುತ್ತೇವೆ. ಡಿಡಿಎಯ ತಪ್ಪಿತಸ್ಥ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ಸಿಜೆಐ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಡಿಎ ಉಪಾಧ್ಯಕ್ಷ ಸುಭಾಶಿಶ್ ಪಾಂಡ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಮೊಕದ್ದಮೆಯ ವಿಚಾರಣೆ ಈಗಾಗಲೇ ಆರಂಭವಾಗಿದೆ.
ಮರ ಕಡಿಯುವಲ್ಲಿ ಲೆ. ಗವರ್ನರ್ ಅವರ ಪಾತ್ರ ಮುಚ್ಚಿಡಲು ಮುಂದಾಗಿದ್ದಕ್ಕೆ ಈ ಹಿಂದೆ ನ್ಯಾ. ಎ ಎಸ್ ಓಕಾ ನೇತೃತ್ವದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ದೆಹಲಿಯ ಲೆ. ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ ಎಂದು ಕಿಡಿಕಾರಿತ್ತು.
ಆದರೆ ತಮ್ಮ ನೇತೃತ್ವದ ಪೀಠದೆದುರು ಪ್ರಕರಣ ಇರುವುದರಿಂದ ನ್ಯಾ. ಓಕಾ ನೇತೃತ್ವದ ಪೀಠ ಪ್ರಕರಣ ಆಲಿಸಬಾರದು ಎಂದು ನ್ಯಾ. ಬಿ ಆರ್ ಗವಾಯಿ ಅವರಿದ್ದ ಪೀಠ ತರುವಾಯ ಹೇಳಿತ್ತು. ಆದ್ದರಿಂದ ಪ್ರಕರಣವನ್ನು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಕೈಗೆತ್ತಿಕೊಂಡಿತ್ತು.
ಅರ್ಜಿದಾರರ ಪರ ಹಿರಿಯ ವಕೀಲರಾದ ಹುಜೆಫಾ ಅಹ್ಮದಿ ಮತ್ತು ಮಾಧವಿ ದಿವಾನ್ ಹಾಗೂ ಅವರ ತಂಡ ವಾದ ಮಂಡಿಸಿತ್ತು. ಪ್ರಕರಣದಲ್ಲಿ ವಕೀಲ ಎ ಡಿ ಎನ್ ರಾವ್ ಅಮಿಕಸ್ ಕ್ಯೂರಿಯಾಗಿದ್ದಾರೆ. ಡಿಡಿಎಯನ್ನು ಹಿರಿಯ ವಕೀಲರಾದ ವಿಕಾಸ್ ಸಿಂಗ್ ಮತ್ತು ಮಹೇಶ್ ಜೇಠ್ಮಲಾನಿ ಪ್ರತಿನಿಧಿಸಿದ್ದರು.