Supreme Court, Kerala High Court 
ಸುದ್ದಿಗಳು

ನಿರೀಕ್ಷಣಾ ಜಾಮೀನು: ಸೆಷನ್ಸ್ ನ್ಯಾಯಾಲಯ ಬಿಟ್ಟು ಕೇರಳ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವುದಕ್ಕೆ ಸುಪ್ರೀಂ ಕಳವಳ

ನಿರೀಕ್ಷಣಾ ಜಾಮೀನು: ಸೆಷನ್ಸ್ ನ್ಯಾಯಾಲಯ ಬಿಟ್ಟು ಕೇರಳ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವುದಕ್ಕೆ ಸುಪ್ರೀಂ ಕಳವಳ

Bar & Bench

ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಮೊದಲು ಸೆಷನ್ಸ್‌ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸದೆಯೇ ತಾನೇ ವಿಚಾರಣೆ ನಡೆಸುತ್ತಿದ್ದ ಕೇರಳ ಹೈಕೋರ್ಟ್‌ ರೂಢಿಗತ ನಡೆ ಬಗ್ಗೆ ಸುಪ್ರೀಂ ಕೋರ್ಟ್‌ ಸೋಮವಾರ ಕಳವಳ ವ್ಯಕ್ತಪಡಿಸಿದೆ [ಮೊಹಮ್ಮದ್ ರಸಲ್ ಸಿ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ಇಂಥದ್ದು ಬೇರೆ ಯಾವುದೇ ಹೈಕೋರ್ಟ್‌ನಲ್ಲಿ ನಡೆದಿಲ್ಲ ಎಂದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌ ) ಅರ್ಜಿಗಳ ವಿಚಾರಣೆಗೆ ಶ್ರೇಣಿ ವ್ಯವಸ್ಥೆ ಇದೆ ಎಂದಿತು.

"ನಮ್ಮನ್ನು ಕಾಡುತ್ತಿರುವ ಸಮಸ್ಯೆ... ಕೇರಳ ಹೈಕೋರ್ಟ್‌ನಲ್ಲಿ, ದಾವೆದಾರರು ಮೊದಲು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸದೆಯೇ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆಯುವ ಸಾಮಾನ್ಯ ಪದ್ಧತಿ ಇದೆ ಎಂದು ತೋರುತ್ತದೆ. ಅದು ಹೇಗೆ? ಸಿಆರ್‌ಪಿಸಿ ಅಥವಾ ಬಿಎನ್‌ಎಸ್‌ಎಸ್‌ನಲ್ಲಿ ಶ್ರೇಣಿ ವ್ಯವಸ್ಥೆ ಇದೆ. ಪ್ರಸ್ತುತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ, ಆದರೆ ತಾತ್ವಿಕವಾಗಿ... ಯಾವುದೇ ಹೈಕೋರ್ಟ್‌ನಲ್ಲಿ ಈ ರೀತಿ ಆಗುವುದಿಲ್ಲ" ಎಂದು ನ್ಯಾಯಾಲಯ ಹೇಳಿತು.

ಮೊದಲು ವಿಚಾರಣಾ ನ್ಯಾಯಾಲಯದ ಪರಿಗಣನೆಗೆ ಬಿಡದೆಯೇ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಅರ್ಜಿ ಆಲಿಸಿದರೆ ಅದು ಸೆಷನ್ಸ್‌ ನ್ಯಾಯಾಲಯದೆದುರು ಬರುತ್ತಿದ್ದ ಸೂಕ್ತ ಸಂಗತಿಗಳು ದಾಖಲಾಗದೇ ಇರಬಹುದು ಎಂದ ಪೀಠ ಈ ಅಂಶವನ್ನು ಪರಿಗಣಿಸಿ ಕಕ್ಷಿದಾರರನ್ನು ಆಯ್ಕೆ ಮಾಡಿಕೊಳ್ಳಲು ಹೈಕೋರ್ಟ್‌ಗೆ ಸ್ವಾತಂತ್ರ್ಯ ಇದೆಯೇ ಅಥವಾ ಸೆಷನ್ಸ್‌ ನ್ಯಾಯಾಲಯವನ್ನು ಅರ್ಜಿದಾರರು ಸಂಪರ್ಕಿಸುವುದು ಕಡ್ಡಾಯವೇ ಎಂಬ ವಿಚಾರ ಕುರಿತು ತೀರ್ಪು ನೀಡಬೇಕಿದೆ ಎಂದಿತು.

ಅಂತೆಯೇ ಪ್ರಕರಣದ ಅಮಿಕಸ್‌ ಕ್ಯೂರಿಯನ್ನಾಗಿ ಹಿರಿಯ ವಕೀಲ ಸಿದ್ಧಾರ್ಥ್‌ ಲೂತ್ರಾ ಅವರನ್ನು ನೇಮಿಸಿದ ಪೀಠ ಕೇರಳ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನೋಟಿಸ್ ಜಾರಿ ಮಾಡಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 14 ರಂದು ನಡೆಯಲಿದೆ.