Supreme Court, Judgment Reserved 
ಸುದ್ದಿಗಳು

ಹೈಕೋರ್ಟ್‌ಗಳ ತೀರ್ಪು ವಿಳಂಬ ಖಂಡಿಸಿದ ಸುಪ್ರೀಂ: ಮಾಸಿಕ ವರದಿ ಸಿದ್ಧಪಡಿಸುವಂತೆ ಆದೇಶ

ಕಾಯ್ದಿರಿಸಿದ ತೀರ್ಪುಗಳನ್ನು ಪ್ರಕಟಿಸುವಲ್ಲಿನ ವಿಳಂಬವು, ಆಶ್ಚರ್ಯಕರವೂ, ಆಘಾತಕಾರಿಯೂ ಆದ ಸಂಗತಿ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.

Bar & Bench

ವಿಚಾರಣೆ ಮುಗಿದರೂ ತೀರ್ಪು ನೀಡುವಲ್ಲಿ ಹೈಕೋರ್ಟ್‌ಗಳು ಅತಿಯಾದ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಕಳವಳ ವ್ಯಕ್ತಪಡಿಸಿದೆ  [ರವೀಂದ್ರ ಪ್ರತಾಪ್ ಸಿಂಗ್ ಮತ್ತು  ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಕಾಯ್ದಿರಿಸಿದ ತೀರ್ಪುಗಳನ್ನು ನೀಡುವಲ್ಲಿನ ವಿಳಂಬವು ಆಘಾತಕಾರಿಯೂ, ಆಶ್ಚರ್ಯಕರವೂ ಆದ ಸಂಗತಿ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.

2008ರಿಂದ ಬಾಕಿ ಉಳಿದಿದ್ದ ಕ್ರಿಮಿನಲ್ ಪ್ರಕರಣವೊಂದರಲ್ಲಿ ಅಲಹಾಬಾದ್ ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶ  ಪ್ರಶ್ನಿಸಿ ರವೀಂದ್ರ ಪ್ರತಾಪ್ ಶಾಹಿ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿತು.

ಕ್ರಿಮಿನಲ್ ಮೇಲ್ಮನವಿಯನ್ನು ಸುದೀರ್ಘವಾಗಿ ಆಲಿಸಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ಡಿಸೆಂಬರ್ 24, 2021ರಂದು ತೀರ್ಪು ಕಾಯ್ದಿರಿಸಿತ್ತು. ಆದರೂ ತೀರ್ಪು ಹೊರಬೀಳದ ಹಿನ್ನೆಲೆಯಲ್ಲಿ ಮತ್ತೊಂದು ಪೀಠದೆದುರು ಪ್ರಕರಣ ಇಡಲಾಗಿತ್ತು. ಶೀಘ್ರ ವಿಲೇವಾರಿಗೆ ಪದೇ ಪದೇ ಅರ್ಜಿ ಸಲ್ಲಿಸಿದರೂ ಅಂತಿಮ ತೀರ್ಪು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ದಾಖಲಿಸಿದೆ.

"ಮೇಲ್ಮನವಿ ವಿಚಾರಣೆ ನಡೆದು ಸುಮಾರು ಒಂದು ವರ್ಷದವರೆಗೆ ತೀರ್ಪು ನೀಡದಿರುವುದು ಅತ್ಯಂತ ಆಘಾತಕಾರಿಯೂ, ಆಶ್ಚರ್ಯಕರವೂ ಆದ ಸಂಗತಿ‍ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  

ಹೈಕೋರ್ಟ್‌ನಲ್ಲಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ವಿಚಾರಣೆ ಬಾಕಿ ಉಳಿದಿರುವ, ಕೆಲವು ಪ್ರಕರಣಗಳಲ್ಲಿ ವಿಚಾರಣೆ ನಡೆದು ಆರು ತಿಂಗಳು ಇಲ್ಲವೇ ವರ್ಷಗಳೇ ಕಳೆದರೂ ತೀರ್ಪು ನೀಡದೆ ಇರುವುದು ಸಾಮಾನ್ಯವಾಗಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

ಈ ಹಿಂದೆ ಅನಿಲ್ ರಾಯ್  ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣದಲ್ಲಿ ತಾನು ನೀಡಿದ್ದ ತೀರ್ಪು ಉಲ್ಲೇಖಿಸಿದ ನ್ಯಾಯಾಲಯ ತೀರ್ಪುಗಳನ್ನು ಸಕಾಲದಲ್ಲಿ ಪ್ರಕಟಿಸುವುದು ನ್ಯಾಯ ವಿತರಣಾ ವ್ಯವಸ್ಥೆಯ ಅತ್ಯಗತ್ಯ ಭಾಗ ಎಂದು ಹೇಳಿತು. ಅಂತೆಯೇ ಕೆಳಕಂಡ ನಿರ್ದೇಶನಗಳನ್ನು ಅದು ನೀಡಿದೆ:

  • ಎಲ್ಲಾ ಹೈಕೋರ್ಟ್ ರಿಜಿಸ್ಟ್ರಾರ್‌ಗಳು ಆ ತಿಂಗಳಲ್ಲಿ ಕಾಯ್ದಿರಿಸಿದ ಆದರೆ ತೀರ್ಪು ನೀಡದ ಪ್ರಕರಣಗಳ ಪಟ್ಟಿಯನ್ನು ಆಯಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯವರಿಗೆ ಸಲ್ಲಿಸಬೇಕು.

  • ತೀರ್ಪು ಕಾಯ್ದಿರಿಸಿದ ದಿನದಿಂದ ಮೂರು ತಿಂಗಳೊಳಗಾಗಿ ತೀರ್ಪು ಪ್ರಕಟಿಸದೆ ಇದ್ದರೆ ರಿಜಿಸ್ಟ್ರಾರ್ ಜನರಲ್ ಆ ಮಾಹಿತಿಯನ್ನು ಮುಖ್ಯ ನ್ಯಾಯಮೂರ್ತಿಯವರಿಗೆ ಸಲ್ಲಿಸಬೇಕು.

  • ಮುಖ್ಯ ನ್ಯಾಯಮೂರ್ತಿಯವರು ಎರಡು ವಾರಗಳೊಳಗೆ ತೀರ್ಪು ನೀಡಲು ಸೂಚನೆ ನೀಡಬೇಕು. ಆಗಲೂ ತೀರ್ಪು ನೀಡದಿದ್ದರೆ, ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವಹಿಸಬೇಕು.

ತಾನು ನೀಡಿರುವ ಆದೇಶದ ಪ್ರತಿಯನ್ನು ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ಕಳುಹಿಸಬೇಕು ಎಂದು ಅದು ಸೂಚಿಸಿದೆ.