ಸುದ್ದಿಗಳು

ಕನಸು ನನಸಾಗಲು ಒಂದೇ ಗೇಣು? ಪ್ರಕರಣಗಳ ನೇರ ಪ್ರಸಾರ ಕುರಿತ ಪರಿಶೀಲನೆಗಾಗಿ ಸಮಿತಿ ರಚಿಸಿದ ಸುಪ್ರೀಂಕೋರ್ಟ್‌

Bar & Bench

ದೇಶದೆಲ್ಲೆಡೆ ಹೈಕೋರ್ಟ್‌ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕಲಾಪಗಳ ನೇರ ಪ್ರಸಾರ ನಡೆಸುವ ಸಂಬಂಧ ನಿಬಂಧನೆಗಳನ್ನು ರೂಪಿಸಲು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಸಮಿತಿಯೊಂದನ್ನು ನೇಮಿಸಲಾಗಿದೆ ಎಂದು ಜಾಲತಾಣ ʼದ ಪ್ರಿಂಟ್‌ʼ ವರದಿ ಮಾಡಿದೆ.

ಸುಪ್ರೀಂ ಕೋರ್ಟ್‌ನ ಇ-ಸಮಿತಿಯಿಂದ ರಚಿಸಲಾದ ನಾಲ್ವರು ಸದಸ್ಯರ ನೂತನ ಸಮಿತಿ ವಿಡಿಯೋ ಜಾಲ ಕಲಾಪಗಳು (ವೀಡಿಯೊ ಕಾನ್ಫರೆನ್ಸಿಂಗ್‌ ವಿಚಾರಣೆ) ಮತ್ತು ನ್ಯಾಯಾಲಯಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಲಿದೆ. ಅದು ಇನ್ನು ಒಂದು ವಾರದೊಳಗೆ ಸುಪ್ರೀಂಕೋರ್ಟ್‌ ಇ- ಸಮಿತಿ ಅಧ್ಯಕ್ಷರಾದ ನ್ಯಾ. ಡಿ ವೈ ಚಂದ್ರಚೂಡ್‌ ಅವರಿಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.

2018ರ ಸ್ವಪ್ನಿಲ್‌ ತ್ರಿಪಾಠಿ ಮತ್ತು ಸುಪ್ರೀಂಕೋರ್ಟ್‌ ನಡುವಣ ಪ್ರಕರಣದ ತೀರ್ಪಿನ ವೇಳೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆ ನಡೆಸುವ ಸಾಂವಿಧಾನಿಕ ಮಹತ್ವದ ತೀರ್ಪುಗಳನ್ನು ನೇರ ಪ್ರಸಾರ ಮಾಡಲು ಸರ್ವೋಚ್ಚ ನ್ಯಾಯಾಲಯ ಅನುವು ಮಾಡಿಕೊಟ್ಟಿತ್ತು.

ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಎ ಎಮ್ ಖಾನ್ವಿಲ್ಕರ್ ಅವರಿದ್ದ ತ್ರಿಸದಸ್ಯ ಪೀಠ ಪ್ರಮುಖ ಪ್ರಕರಣಗಳ ನೇರ ಪ್ರಸಾರಕ್ಕೆ ಅನುಕೂಲವಾಗುವಂತೆ ಅಗತ್ಯ ನಿಯಮ ಮತ್ತು ಮಾರ್ಗಸೂಚಿಗಳನ್ನು ರೂಪಿಸುವಂತೆ ನ್ಯಾಯಾಲಯದ ಆಡಳಿತಕ್ಕೆ ನಿರ್ದೇಶನ ನೀಡಿತ್ತು.

ಆದರೆ, ಈ ಬಗ್ಗೆ ನ್ಯಾಯಾಲಯ ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ. ಮಹತ್ವದ ಪ್ರಕರಣಗಳ ಕಲಾಪ ಜನಸಾಮಾನ್ಯರಿಗೆ ತಲುಪಬಹುದು ಎಂಬ ಕಾರಣಕ್ಕೆ ನಿಯಮಗಳನ್ನು ರೂಪಿಸುವಂತೆ ಸುಪ್ರೀಂಕೋರ್ಟ್‌ ಆಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸ್ವಪ್ನಿಲ್ ತ್ರಿಪಾಠಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಮನವಿ ಸಲ್ಲಿಸಿದ್ದರು. ಈ ಮಧ್ಯೆ ಗುಜರಾತ್, ಮದ್ರಾಸ್ ಮತ್ತು ಕಲ್ಕತ್ತಾದ ಹೈಕೋರ್ಟ್‌ಗಳು ಸೀಮಿತ ನೆಲೆಯಲ್ಲಿ ಕಲಾಪಗಳ ನೇರ ಪ್ರಸಾರ ಆರಂಭಿಸಿವೆ. ಗುಜರಾತ್ ಹೈಕೋರ್ಟ್ ಅಕ್ಟೋಬರ್ 26 ರಿಂದ ಯುಟ್ಯೂಬ್ ಮೂಲಕ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಕಲಾಪ ನೇರ ಪ್ರಸಾರ ಆರಂಭಿಸಿದೆ. ಕಲ್ಕತ್ತಾ ಹೈಕೋರ್ಟ್, ಕಳೆದ ಫೆಬ್ರುವರಿ ತಿಂಗಳಲ್ಲಿ ಪಾರ್ಸಿ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣವೊಂದರ ಅಂತಿಮ ವಿಚಾರಣೆಯ ನೇರ ಪ್ರಸಾರಕ್ಕೆ ಅನುಮತಿ ನೀಡಿತ್ತು.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೈಕೋರ್ಟ್‌ಗಳು ನೇರ ಪ್ರಸಾರ ಮಾಡುತ್ತಿರುವುದನ್ನು ವಿವರಿಸಿ ಸುಪ್ರೀಂ ಕೋರ್ಟ್‌ ಕೂಡ ಇದನ್ನು ಅನುಸರಿಸಬೇಕೆಂದು ಇತ್ತೀಚೆಗೆ ಒತ್ತಾಯಿಸಿದ್ದರು. ದೇಶದಾದ್ಯಂತ ಜನ ನ್ಯಾಯಾಲಯ ಕಲಾಪಗಳನ್ನು ವೀಕ್ಷಿಸಬಹುದು ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಪ್ರಕರಣಗಳ ನೇರಪ್ರಸಾರ ಪ್ರಾರಂಭಿಸಬೇಕು ಎಂದು ಅಕ್ಟೋಬರ್ 26 ರಂದು ಒತ್ತಾಯಿಸಿದ್ದರು.

“ನಾನು ಮದ್ರಾಸ್‌ ಹೈಕೋರ್ಟ್‌ನ ನೇರಪ್ರಸಾರ ವೀಕ್ಷಿಸುತ್ತಿದ್ದೆ. ಯಾವುದೇ ತಾಂತ್ರಿಕ ತೊಂದರೆ ಇರಲಿಲ್ಲ. ದೇಶದಾದ್ಯಂತ ಕಲಾಪಗಳನ್ನು ವೀಕ್ಷಿಸಬಹುದಾದ್ದರಿಂದ ಇದನ್ನೂ ತಮ್ಮ ಕಾರ್ಯಸೂಚಿಯಾಗಿ ಪರಿಗಣಿಸಬೇಕುʼ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ವೇಣುಗೋಪಾಲ್ ತಿಳಿಸಿದ್ದರು. ಆಗ ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ಸಿಜೆಐ ಎಸ್‌ ಎ ಬೊಬ್ಡೆ ಪ್ರತಿಕ್ರಿಯೆ ನೀಡಿದ್ದರು.