ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ [ವಿಜಯ್ ನಾಯರ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].
ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ಇ ಡಿ ಸಕಾಲದಲ್ಲಿ ತನಿಖೆ ಪೂರ್ಣಗೊಳಿಸಲಿಲ್ಲ. ಜೊತೆಗೆ ಸುಮಾರು 350 ಸಾಕ್ಷಿಗಳನ್ನು ಪರಿಶೀಲಿಸಬೇಕಿದೆ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ಪೀಠ ತಿಳಿಸಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿಚಾರಣೆ ನಡೆಯುತ್ತಿದ್ದಾಗ 6 ರಿಂದ 8 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲಾಗುವುದು ಎಂದು ಇ ಡಿ ಭರವಸೆ ನೀಡಿತ್ತಾದರೂ ಈಗಲೂ ವಿಚಾರಣೆ ಆರಂಭವಾಗಿಲ್ಲ. ಸುಮಾರು 40 ಮಂದಿ ಆರೋಪಿಗಳನ್ನು ಹೆಸರಿಸಲಾಗಿದ್ದು ನ್ಯಾಯಾಲಯವು 350 ಸಾಕ್ಷಿಗಳ ಪರಿಶೀಲನೆ ನಡೆಯಬೇಕಿದೆ ಎಂದು ನ್ಯಾಯಾಲಯ ವಿವರಿಸಿತು.
ನಾಯರ್ 23 ತಿಂಗಳು ಬಂಧನದಲ್ಲಿದ್ದು ಅವರ ವಿರುದ್ಧದ ವಿಚಾರಣೆ ಶಿಕ್ಷೆಯಾಗಬಾರದು ಎಂದು ನ್ಯಾಯಾಲಯ ಹೇಳಿತು. ಜಾಮೀನಿಗೆ ಆದ್ಯತೆ ಜೈಲು ಶಿಕ್ಷೆ ನಂತರದ ಸಂಗತಿ ಎಂಬುದಾಗಿ ಅದು ಇದೇ ವೇಳೆ ತಿಳಿಸಿತು.
ಸಂವಿಧಾನದ 21ನೇ ವಿಧಿಯಡಿ ಸ್ವಾತಂತ್ರ್ಯದ ಹಕ್ಕು ಒಂದು ಪವಿತ್ರ ಹಕ್ಕಾಗಿದ್ದು, ಅಕ್ರಮ ಹಣ ವರ್ಗಾವಣೆ ಕಾಯಿದೆಯಂತಹ (ಪಿಎಂಎಲ್‌ಎ) ವಿಶೇಷ ಕಾನೂನುಗಳ ಅಡಿ ಕಠಿಣ ಸೆಕ್ಷನ್‌ಗಳನ್ನು ಜಾರಿಗೊಳಿಸಿದ ವೇಳೆಯೂ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಇತರ ಆರೋಪಿಗಳಾದ ಮನೀಶ್ ಸಿಸೋಡಿಯಾ ಮತ್ತು ಕೆ ಕವಿತಾ ಅವರಿಗೆ ಈಗಾಗಲೇ ಜಾಮೀನು ನೀಡಿರುವುದನ್ನು ಪರಿಗಣಿಸಿದ ನ್ಯಾಯಾಲಯ ಅವರಿಗೆ ವಿಧಿಸಲಾಗಿದ್ದ ಷರತ್ತುಗಳನ್ವಯವೇ ನಾಯರ್ ಅವರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಅದು ಆದೇಶಿಸಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇನ್ನೂ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5 ರಂದು ವಿಚಾರಣೆ ನಡೆಸಲಿದೆ.