ದೆಹಲಿ ಅಬಕಾರಿ ನೀತಿ ಪ್ರಕರಣ: ಕೆ ಕವಿತಾಗೆ ಸುಪ್ರೀಂ ಕೋರ್ಟ್ ಜಾಮೀನು
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಲಾಯ (ಇ ಡಿ) ಮತ್ತು ಸಿಬಿಐ ದಾಖಲಿಸಿದ್ದ ಎರಡೂ ಪ್ರಕರಣಗಳಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕಲ್ವಕುಂಟ್ಲ ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ [ಕಲ್ವಕುಂಟ್ಲ ಕವಿತಾ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].
ತನಿಖೆ ಮುಗಿದಿದ್ದು ವಿಚಾರಣೆ ಪೂರ್ಣಗೊಳ್ಳಲು ಬಹಳಷ್ಟು ಸಮಯ ಹಿಡಿಯುವ ಹಿನ್ನೆಲೆಯಲ್ಲಿ ಈ ಆದೇಶ ನೀಡುತ್ತಿರುವುದಾಗಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ತಿಳಿಸಿದೆ.
ತನಿಖೆ ಪೂರ್ಣಗೊಂಡಿದ್ದು ಆರೋಪಪಟ್ಟಿ ಸಲ್ಲಿಸಲಾಗಿದೆ. ಕವಿತಾ ಅವರನ್ನು ಕಸ್ಟಡಿಯಲ್ಲಿರಿಸಿಕೊಳ್ಳುವ ಅಗತ್ಯವಿಲ್ಲ, ಅವರು 5 ತಿಂಗಳ ಕಾಲ ಜೈಲಿನಲ್ಲಿದ್ದಾರೆ. ಶೀಘ್ರವೇ ವಿಚಾರಣೆ ಮುಕ್ತಾಯಗೊಳ್ಳುವ ಸಾಧ್ಯತೆ ಕಂಡುಬರುತ್ತಿಲ್ಲ. ಈ ಕುರಿತು ವಿವಿಧ ತೀರ್ಪುಗಳಲ್ಲಿ ಹೇಳಿರುವಂತೆ ನ್ಯಾಯಾಲಯ, ವಿಚಾರಣಾಧೀನತೆ ಎಂಬುದು ಶಿಕ್ಷೆಯಾಗಿ ಬದಲಾಗಬಾರದು ಎಂದು ನ್ಯಾಯಾಲಯ ವಿವರಿಸಿದೆ.
ಪಿಎಂಎಲ್ಎ ಪ್ರಕಾರ ಮಹಿಳೆಯರಿಗೆ ಇರುವ ಸವಲತ್ತಿನಡಿ ವಿದ್ಯಾವಂತ, ಅತ್ಯಾಧುನಿಕ ಮಹಿಳೆ ಜಾಮೀನು ಪಡೆಯಲು ಅರ್ಹರಲ್ಲ ಎಂಬ ದೆಹಲಿ ಹೈಕೋರ್ಟ್ ಅವಲೋಕನಗಳಿಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸೆಕ್ಷನ್ 45(1)ರ ನಿಬಂಧನೆಯಡಿ ಮಹಿಳೆಯನ್ನು ವಿಶೇಷವಾಗಿ ಪರಿಗಣಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ದೆಹಲಿ ಹೈಕೋರ್ಟ್ ಆದೇಶವನ್ನು ಕಾನೂನಾಗಿಸಲು ಅವಕಾಶವಿತ್ತರೆ, ಅದರ ಅಸಂಬದ್ಧ ಅವಲೋಕನಗಳು ಯಾವುದೇ ವಿದ್ಯಾವಂತ ಮಹಿಳೆ ಜಾಮೀನು ಪಡೆಯುವಂತೆ ಇಲ್ಲ ಎಂಬ ಅರ್ಥ ಹೊಮ್ಮಿಸುತ್ತದೆ ಎಂದಿರುವ ಸರ್ವೋಚ್ಚ ನ್ಯಾಯಾಲಯ, ಸಂಸದರು ಮತ್ತು ಸಾಮಾನ್ಯ ವ್ಯಕ್ತಿಗಳಿಗೂ ಅಂತರ ಇರಬಾರದು ಎನ್ನುವ ನ್ಯಾಯಾಂಗವೇ ಇಲ್ಲಿ ಸಂವಿಧಾನದತ್ತವಲ್ಲದ ಕೃತಕ ಆಲೋಚನೆ ಕಂಡುಬರುತ್ತಿದೆ ಎಂಬುದಾಗಿ ಕಿಡಿಕಾರಿದೆ.
ಒಂದೆಡೆ, ಕವಿತಾ ಅವರು ಸುಶಿಕ್ಷಿತ ಮಹಿಳೆಯಾಗಿದ್ದು, ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ ಎಂದಿದ್ದ ಹೈಕೋರ್ಟ್ ಆಕೆ ಸುಶಿಕ್ಷಿತರು ಎಂಬ ಕಾರಣಕ್ಕೇ ಜಾಮೀನು ನಿರಾಕರಿಸಿದ್ದು ವಿರೋಧಾಭಾಸದ ಸಂಗತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಿಎಂಎಲ್‌ಎ ಅಡಿಯಲ್ಲಿ ಆರೋಪಿಯಾಗಿರುವ ಮಹಿಳೆಯರ ಬಗ್ಗೆ ನ್ಯಾಯಾಲಯಗಳು ಹೆಚ್ಚು ಸಂವೇದನಾಶೀಲವಾಗಿರಬೇಕು ಎಂದು ಕೂಡ ಅದು ಕಿವಿಹಿಂಡಿದೆ.
ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮೂರನೇ ಪ್ರಮುಖ ರಾಜಕೀಯ ನಾಯಕಿ ಕವಿತಾ.
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಜುಲೈ 1 ರಂದು ಬಿಆರ್‌ಎಸ್ ನಾಯಕಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ಆ ಬಳಿಕ ಕವಿತಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಹಿಂದೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಾದ ಸಂಜಯ್ ಸಿಂಗ್ ಮತ್ತು ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಎಎಪಿ ಸಂಸದ ಸಂಜಯ್ ಸಿಂಗ್ ಅವರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಇ ಡಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದು ಸಿಬಿಐ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.