DHFL and Supreme Court  
ಸುದ್ದಿಗಳು

₹57,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ವಾಧ್ವಾನ್ ಸಹೋದರರಿಗೆ ಸುಪ್ರೀಂ ಜಾಮೀನು

ಇದು ದೇಶದ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಒಂದು ಎಂದು ಬಣ್ಣಿಸಿದ್ದ ಸಿಬಿಐ, 17 ಬ್ಯಾಂಕುಗಳ ಒಕ್ಕೂಟದಿಂದ ಡಿಎಚ್ಎಫ್ಎಲ್ ಪಡೆದಿದ್ದ ಸಾಲವನ್ನು ಭಾರೀ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದಿತ್ತು.

Bar & Bench

₹57,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್‌) ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್‌ ಅವರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ. [ಕಪಿಲ್ ವಾಧವನ್ ಮತ್ತು ಸಿಬಿಐ ನಡುವಣ ಪ್ರಕರಣ]

ವಿಚಾರಣೆಯೇ ಆರಂಭವಾಗದೆ ದೀರ್ಘಕಾಲ ಅವರನ್ನು ಜೈಲಿನಲ್ಲಿ ಇರಿಸುವುದು ಸ್ವಾತಂತ್ರ್ಯ ಮತ್ತು ತ್ವರಿತ ವಿಚಾರಣೆಗೆ ಸಂಬಂಧಿಸಿದಂತೆ ಇರುವ ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆ ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ತಿಳಿಸಿತು.  

ಸಂಬಂಧಿತ ಪ್ರಕರಣಗಳಲ್ಲಿ ಉಳಿದ ಆರೋಪಿಗಳಿಗೆ ಜಾಮೀನು ದೊರೆತಿದ್ದರೂ, ವಾಧ್ವಾನ್‌ ಸಹೋದರರು ಐದು ವರ್ಷಕ್ಕೂ ಹೆಚ್ಚು ಕಾಲದಿಂದ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ ಎಂದ ನ್ಯಾಯಾಲಯ ಇಬ್ಬರ ವಿರುದ್ಧದ ತನಿಖೆ ಪೂರ್ಣಗೊಂಡಿರುವುದನ್ನು ಗಣನೆಗೆ ತೆಗೆದುಕೊಂಡಿತು.

ನಾಲ್ಕು ಲಕ್ಷ ಪುಟಗಳಷ್ಟು ಸುದೀರ್ಘ ಆರೋಪಪಟ್ಟಿ ಇದ್ದು  736 ಸಾಕ್ಷಿಗಳು, 17 ಟ್ರಂಕ್ ದಾಖಲೆಗಳು ಹಾಗೂ ದೊಡ್ಡ ಪ್ರಮಾಣದ ಡಿಜಿಟಲ್ ಮಾಹಿತಿಯಿದೆ. ನಿತ್ಯ ವಿಚಾರಣೆ ನಡೆಸಿದರೂ ವಿಚಾರಣೆ ಪೂರ್ಣಗೊಳ್ಳಲು 2–3 ವರ್ಷಗಳು ಹಿಡಿಯಬಹುದು ಎಂದು ನ್ಯಾಯಾಲಯ ಹೇಳಿತು.  

ಇದು ದೇಶದ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಒಂದು ಎಂದು ಬಣ್ಣಿಸಿದ್ದ ಸಿಬಿಐ, 17 ಬ್ಯಾಂಕುಗಳ ಒಕ್ಕೂಟದಿಂದ ಡಿಎಚ್‌ಎಫ್‌ಎಲ್ ಪಡೆದಿದ್ದ ಸಾಲವನ್ನು ಭಾರೀ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದಿತ್ತು.

ಆದರೆ ಆರ್ಥಿಕ ಅಪರಾಧಗಳು ಗಂಭೀರವಾದರೂ ʼಜಾಮೀನಿಗೆ ಆದ್ಯತೆಯೇ ವಿನಾ ಸೆರೆವಾಸಕ್ಕಲ್ಲʼ ಎಂಬ ತತ್ವ ಅನ್ವಯಿಸಬೇಕಿದೆ ಎಂದ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತು.

ಆರೋಪಿಗಳು ಶ್ಯೂರಿಟಿ ಬಾಂಡ್‌ಗಳನ್ನು ಪಾಸ್‌ಪೋರ್ಟ್‌ಗಳನ್ನು ಸಲ್ಲಿಸಬೇಕು. ಪೊಲೀಸರೆದುರು ನಿಯಮಿತವಾಗಿ ಹಾಜರಾಗಬೇಕು ಹಾಗೂ ವಿದೇಶ ಪ್ರವಾಸಕ್ಕೆ ಮುನ್ನ ಅನುಮತಿ ಪಡೆಯಬೇಕು ಎಂದು ತಾಕೀತು ಮಾಡಿದ ಅದು ಷರತ್ತು ಉಲ್ಲಂಘನೆಯಾದರೆ ಜಾಮೀನು ರದ್ದುಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿತು.

ವಾಧ್ವಾನ್‌ ಸಹೋದರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಮುಕುಲ್‌ ರೋಹಟ್ಗಿ, ಬಲ್ಬೀರ್‌ ಸಿಂಗ್‌, ಹಾಗೂ ಅರವಿಂದ್‌ ನಾಯರ್‌, ಪ್ರಾಸಿಕ್ಯೂಷನ್‌ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಮತ್ತವರ ಕಾನೂನು ತಂಡ ವಾದ ಮಂಡಿಸಿತು.

[ಆದೇಶದ ಪ್ರತಿ]

Kapil_Wadhawan_vs__Central_Bureau_of_Investigation.pdf
Preview