TANDAV amazon prime, Supreme Court
TANDAV amazon prime, Supreme Court 
ಸುದ್ದಿಗಳು

[ತಾಂಡವ್]‌ ಅಮೆಜಾನ್‌ ಪ್ರೈಮ್‌ ಭಾರತದ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಬಂಧಿಸದಂತೆ ಸುಪ್ರೀಂ ಕೋರ್ಟ್‌ ಆದೇಶ

Bar & Bench

ತಾಂಡವ್‌ ವೆಬ್‌ ಸರಣಿಗೆ ಸಂಬಂಧಿಸಿದಂತೆ ದಾಖಲಾಗಿರುವ ದೂರಿನ ಹಿನ್ನೆಲೆಯಲ್ಲಿ ಅಮೆಜಾನ್‌ ಪ್ರೈಮ್‌ ಭಾರತದ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಅವರನ್ನು ಬಂಧಿಸದಂತೆ ಶುಕ್ರವಾರ ಸುಪ್ರೀಂ ಕೋರ್ಟ್‌ ಅವರಿಗೆ ರಕ್ಷಣೆ ನೀಡಿ ಆದೇಶಿಸಿದೆ.

ಒಟಿಟಿ ವೇದಿಕೆಗಳನ್ನು ನಿಯಂತ್ರಿಸುವ ಸಂಬಂಧ ಜಾರಿಗೊಳಿಸಲಾಗಿರುವ ನಿಯಂತ್ರಣಾ ಕ್ರಮಗಳು ಸಶಕ್ತವಾಗಿಲ್ಲ. ಕಾನೂನು ಜಾರಿಗೊಳಿಸದೇ ಅಂಥ ವಿಷಯಗಳ ಮೇಲೆ ನಿಯಂತ್ರಣ ಸಾಧಿಸಲಾಗದು ಎಂದು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಆರ್‌ ಸುಭಾಷ್‌ ರೆಡ್ಡಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯ ವೇಳೆ ಹೇಳಿತು.

ತಾಂಡವ್‌ ವೆಬ್‌ ಸರಣಿಗೆ ಸಂಬಂಧಿಸಿದಂತೆ ಗ್ರೇಟರ್‌ ನೊಯ್ಡಾದಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಫೆಬ್ರವರಿ 25ರಂದು ಅಲಾಹಾಬಾದ್‌ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಅಪರ್ಣಾ ಪುರೋಹಿತ್‌ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಆರೋಪಿ ಅಪರ್ಣಾ‌ ಅವರು ತನಿಖಾ ಸಂಸ್ಥೆಗಳಿಗೆ ಸಹಕರಿಸುತ್ತಿದ್ದಾರೆ. ವೆಬ್‌ ಸೀರಿಸ್‌ ವೀಕ್ಷಿಸಬಹುದಾದ ವೇದಿಕೆಯ ಮಾಲೀಕತ್ವ ಹೊಂದಿರುವ ಅಮೆಜಾನ್‌ ಪ್ರೈಮ್‌ನಲ್ಲಿ ಪುರೋಹಿತ್‌ ಉದ್ಯೋಗಿ ಮಾತ್ರ. ಆರೋಪಿಸಲಾದ ಆಕ್ಷೇಪಾರ್ಹ ದೃಶ್ಯಗಳನ್ನು ಈಗಾಗಲೇ ತೆಗೆದು ಹಾಕಲಾಗಿದೆ. ವೆಬ್‌ ಸೀರಿಸ್‌ ತಯಾರಕರು ಈಗಾಗಲೇ ಕ್ಷಮೆ ಕೋರಿದ್ದಾರೆ ಎಂದು ಪುರೋಹಿತ್‌ ಪರ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ನ್ಯಾಯಾಲಯದ ಗಮನಸೆಳೆದರು.

“ನಾವು ಈಗಾಗಲೇ ಎರಡು ದೃಶ್ಯಗಳನ್ನು ತೆಗೆದುಹಾಕಿದ್ದೇವೆ. ಒಂದೊಮ್ಮೆ ಸಾಲಿಸಿಟರ್‌ ಜನರಲ್‌ (ತುಷಾರ್‌ ಮೆಹ್ತಾ) ಅವರು ಹೇಳಿದರೆ ಮತ್ತಷ್ಟು ದೃಶ್ಯಗಳನ್ನು ತೆಗೆದುಹಾಕಲಿದ್ದೇವೆ” ಎಂದು ರೋಹಟ್ಗಿ ಹೇಳಿದರು. ವಿಚಾರಣೆಯ ವೇಳೆ‌ ರೋಹಟ್ಗಿ ಅವರು ಒಟಿಟಿ ವೇದಿಕೆಗಳಲ್ಲಿ ನಾನೇ ಶೋಗಳನ್ನು ವೀಕ್ಷಿಸುತ್ತೇನೆ. ಅಲ್ಲಿ ಅಶ್ಲೀಲವಾದುದೇನೂ ಇಲ್ಲ ಎಂದೂ ಸಹ ತಿಳಿಸಿದರು.

ಬಳಿಕ ನ್ಯಾಯಾಲಯವು ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಅಪರ್ಣಾ ಪುರೋಹಿತ್‌ ಅವರು ತನಿಖೆಗೆ ಸಹಕರಿಸುತ್ತಿರುವುದರಿಂದ ಅವರನ್ನು ಬಂಧಿಸದಂತೆ ಆದೇಶಿಸಿತು.

“ನಾವು ತಾಂತ್ರಿಕ ಮಧ್ಯಸ್ಥಿಕೆ ಮಾರ್ಗಸೂಚಿಗಳನ್ನು ಓದಿದ್ದೇವೆ. ಅದಕ್ಕೆ ಹಲ್ಲಿಲ್ಲ. ಕಾನೂನು ಕ್ರಮ ಜರುಗಿಸುವ ಅಧಿಕಾರವಿಲ್ಲ. ಅವುಗಳು ಮಾರ್ಗಸೂಚಿಗಳಷ್ಟೇ. ಅವುಗಳನ್ನು ನಿಯಂತ್ರಿಸಲು ಯಾವುದೇ ವಿಧಾನವಿಲ್ಲ. ಕಾನೂನು ರೂಪಿಸದೇ ನೀವು ಅವುಗಳನ್ನು ನಿಯಂತ್ರಿಸಲಾಗದು” ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಹೇಳಿದರು.

ಕೇಂದ್ರ ಸರ್ಕಾರವು ಕರಡು ಮಸೂದೆ ಸಿದ್ಧಪಡಿಸಿ ನ್ಯಾಯಾಲಯದ ಪರಿಗಣನೆಗೆ ಮಂಡಿಸಲಿದೆ ಎಂದು ತುಷಾರ್‌ ಮೆಹ್ತಾ ಈ ಸಂದರ್ಭದಲ್ಲಿ ಪೀಠಕ್ಕೆ ತಿಳಿಸಿದರು. ಪ್ರಕರಣದ ಸಂಬಂಧ ಕೇಂದ್ರಕ್ಕೆ ನೋಟಿಸ್‌ ನೀಡಿದ ಪೀಠವು ಅಪರ್ಣಾ ಅವರಿಗೆ ತನಿಖೆಗೆ ಸಹಕರಿಸಲು ಸೂಚಿಸಿ ಬಂಧನದಿಂದ ರಕ್ಷಣೆ ನೀಡಿತು.