ತಾಂಡವ್‌ ವಿರುದ್ಧ ಎಫ್‌ಐಆರ್‌: ಅಮೆಜಾನ್‌ ಪ್ರೈಮ್‌ ಹಿರಿಯ ಅಧಿಕಾರಿ ಅಪರ್ಣಾ ಪುರೋಹಿತ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ಈಚೆಗೆ ಬಿಡುಗಡೆಯಾಗಿರುವ ವೆಬ್‌ ಸೀರಿಸ್‌ ʼತಾಂಡವ್‌ʼ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಆಲಾಹಾಬಾದ್‌ ಹೈಕೋರ್ಟ್‌ ಜಾಮೀನು ಆದೇಶ ಹೊರಡಿಸಿದೆ.
Tandav, Amazon Prime
Tandav, Amazon Prime

ʼತಾಂಡವ್‌ʼ ವೆಬ್‌ ಸೀರಿಸ್‌ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಅಮೆಜಾನ್‌ ಪ್ರೈಮ್‌ನ ಕಾರ್ಯಕ್ರಮಗಳ ವಸ್ತು ವಿಷಯ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಕುರಿತಾಗಿ ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಅಥವಾ ಬಂಧಿಸದಂತೆ ಗುರುವಾರ ಅಲಾಹಾಬಾದ್‌ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 438ರ ಅಡಿ ಪುರೋಹಿತ್‌ ಮಧ್ಯಂತರ ಜಾಮೀನಿಗೆ ಮನವಿ ಸಲ್ಲಿಸಿದ್ದರು. “ಆದೇಶ ಹೊರಡಿಸುವವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದು,” ಎಂದು ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಸಿದ್ಧಾರ್ಥ್‌ ಅವರು ಪೊಲೀಸರಿಗೆ ನಿರ್ದೇಶಿಸಿದ್ದರು.

Also Read
“ವಾಕ್‌ ಸ್ವಾತಂತ್ರ್ಯದ ಹಕ್ಕು ಪರಿಪೂರ್ಣವಲ್ಲ:” ತಾಂಡವ್‌ ತಯಾರಕರ ಬಂಧಿಸದಂತೆ ಮಧ್ಯಂತರ ತಡೆ ನೀಡಲು ಸುಪ್ರೀಂ ನಕಾರ

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153-ಎ, 295-ಎ, 505(1)(ಬಿ), 505(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 66 ಮತ್ತು 67ರ ಎಫ್‌ಐಆರ್‌ ದಾಖಲಿಸಲಾಗಿತ್ತು. ಪುರೋಹಿತ್‌ ಅಲ್ಲದೇ ತಾಂಡವ್‌ ನಿರ್ದೇಶಕ ಅಲಿ ಅಬ್ಬಾಸ್‌ ಜಫರ್‌, ನಿರ್ಮಾಪಕ ಹಿಮಾಂಶು ಮೆಹ್ರಾ ಮತ್ತು ಬರಹಗಾರ ಗೌರವ್‌ ಸೋಲಂಕಿ ಅವರ ವಿರುದ್ಧವೂ ದೂರು ದಾಖಲಿಸಲಾಗಿದೆ. ಇಷ್ಟು ಮಾತ್ರವಲ್ಲದೇ, ಮಧ್ಯ ಪ್ರದೇಶ, ಲಖನೌ, ನೋಯಿಡಾ ಇತರೆ ಸ್ಥಳಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಆರೋಪಿಗಳಿಗೆ ಜನವರಿ 20ರಂದು ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಜನವರಿ 27ರಂದು ʼತಾಂಡವ್‌ʼ ತಯಾರಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್‌ ದೇಶದ ಉದ್ದಗಲಕ್ಕೂ ಇರುವ ಹೈಕೋರ್ಟ್‌ಗಳಲ್ಲಿ ಜಾಮೀನಿಗೆ ಮನವಿ ಸಲ್ಲಿಸುವಂತೆ ಸೂಚಿಸಿತ್ತು.

Kannada Bar & Bench
kannada.barandbench.com