Former CJI Ranjan Gogoi 
ಸುದ್ದಿಗಳು

ನಿವೃತ್ತ ಸಿಜೆಐ ಗೊಗೊಯ್‌ ವಿರುದ್ಧದ ಅರ್ಜಿ ವಿಚಾರಣೆ ವೇಳೆ ಮಾತಿನ ಚಕಮಕಿ: ಭದ್ರತಾ ಸಿಬ್ಬಂದಿ ಕರೆಸಿದ ಸುಪ್ರೀಂ

ಸೇವಾ ವಿವಾದಕ್ಕೆ ಸಂಬಂಧಿಸಿದ ಅರ್ಜಿಯನ್ನು ಅಧಿಕಾರದಲ್ಲಿದ್ದ ವೇಳೆ ವಜಾಗೊಳಿಸಿದ್ದ ನಿವೃತ್ತ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಆಂತರಿಕ ತನಿಖೆ ನಡೆಸುವಂತೆ ಕೋರಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

Bar & Bench

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದ ವಕೀಲ ಮತ್ತು ಪೀಠದ ನಡುವಿನ ತೀವ್ರ ಮಾತಿನ ಚಕಮಕಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಾಕ್ಷಿಯಾಯಿತು [ಅರುಣ್‌ ರಾಮಚಂದ್ರ ಹುಬ್ಳೀಕರ್‌ ಮತ್ತು ನ್ಯಾ. ರಂಜನ್‌ ಗೊಗೊಯ್‌ ನಡುವಣ ಪ್ರಕರಣ].

ಸೇವಾ ವಿವಾದಕ್ಕೆ ಸಂಬಂಧಿಸಿದ ಅರ್ಜಿಯನ್ನು ಅಧಿಕಾರದಲ್ಲಿದ್ದ ವೇಳೆ ವಜಾಗೊಳಿಸಿದ್ದ ನ್ಯಾ. ಗೊಗೊಯ್‌ ಅವರ ವಿರುದ್ಧ ಆಂತರಿಕ ತನಿಖೆ ನಡೆಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಕಡೆಗೆ ಅರ್ಜಿದಾರ ಅರುಣ್‌ ರಾಮಚಂದ್ರ ಹುಬ್ಳೀಕರ್‌ ಅವರನ್ನು ನ್ಯಾಯಾಲಯದಿಂದ ಹೊರಗೆ ಕಳಿಸಲು ಭದ್ರತಾ ಸಿಬ್ಬಂದಿಗೆ ಆದೇಶಿಸಿತು.

 “ನಾವಿದಕ್ಕೆ ಇತಿಶ್ರೀ ಹಾಡಲು ಹೊರಟಿದ್ದೇವೆ. ಒಂದರ ನಂತರ ಒಂದರಂತೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ” ಎಂದು ನ್ಯಾಯಾಲಯ ಆರಂಭದಲ್ಲಿ ನುಡಿಯಿತು. ಆಗ ಹುಬ್ಳೀಕರ್‌ "ನಾನು ನನ್ನ ಎಲ್‌ಎಲ್‌ಬಿ ಮತ್ತು ಎಲ್‌ಎಲ್‌ಎಂ ಪೂರ್ಣಗೊಳಿಸಿದ್ದೇನೆ. ನ್ಯಾಯಮೂರ್ತಿ ಗೊಗೋಯ್ ವಿನಾಕಾರಣ ತೀರ್ಪೊಂದರಲ್ಲಿ ಮಧ್ಯಪ್ರವೇಶಿಸಿದ್ದಾರೆ. ನನ್ನನ್ನು ಅಕ್ರಮವಾಗಿ ವಜಾಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ನನ್ನ ಪರವಾಗಿ ಬಂದಿದ್ದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಿ ಅವರು ನನ್ನ ಜೀವನವನ್ನು ದುರ್ಭರಗೊಳಿಸಿದ್ದಾರೆ” ಎಂದರು. ಆದರೆ ಅವರ ಮನವಿಯನ್ನು ನ್ಯಾಯಾಲಯ ಪರಿಗಣಿಸಲಿಲ್ಲ.

“ನಾವು ದಂಡ ವಿಧಿಸಲಿದ್ದೇವೆ. ನ್ಯಾಯಮೂರ್ತಿಗಳ ಹೆಸರನ್ನು ಪ್ರಸ್ತಾಪಿಸಬೇಡಿ. ನಿಮ್ಮ ಪ್ರಕರಣದಲ್ಲಿ ಏನೂ ಇಲ್ಲ” ಎಂದಿತು.

ಆಗ ಹುಬ್ಳೀಕರ್‌ ಅವರು “ಏನೂ ಇಲ್ಲ? ಹಾಗೆ ಹೇಳಲು ಹೇಗೆ ಸಾಧ್ಯ? ಅದು ನನ್ನ ವಿರುದ್ಧದ ಅನ್ಯಾಯ. ಕನಿಷ್ಠ ನನ್ನ ಸಾವಿಗೆ ಮೊದಲಾದರೂ ನನಗೆ ನ್ಯಾಯ ಸಿಗಬೇಕು" ಎಂದರು. ಆದರೂ ಅರ್ಜಿ ವಜಾಗೊಳಿಸುವುದಾಗಿ ನ್ಯಾಯಾಲಯ ಪುನರುಚ್ಚರಿಸಿತು. "ಕ್ಷಮಿಸಿ, ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಿಮ್ಮ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ" ಎಂದಿತು.

ಆದರೆ ಶಾಂತರಾಗದ ಹುಬ್ಳೀಕರ್‌ ಅವರು "ನೀವು ಹೇಗೆ ಕ್ಷಮೆ ಕೇಳುತ್ತೀರಿ? ಈ ನ್ಯಾಯಾಲಯ ನನ್ನ ಜೀವನವನ್ನು ದುರ್ಭರಗೊಳಿಸಿದೆ" ಎಂದು ಆಕ್ರೋಶದಿಂದ ತಿರುಗೇಟು ನೀಡಿದರು.‌

ಆಗ ನ್ಯಾ. ಬೇಲಾ ಅವರು ಹುಬ್ಳೀಕರ್‌ ಅವರನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ಯುವಂತೆ ಭದ್ರತಾ ಸಿಬ್ಬಂದಿಗೆ ಆದೇಶಿಸಿದರು. “ಭದ್ರತಾ ಸಿಬ್ಬಂದಿಯನ್ನು ಕರೆಯಿರಿ. ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮನ್ನು ಒತ್ತಾಯಿಸದಿರಿ. ಇನ್ನು ಒಂದೇ ಒಂದು ಮಾತನಾಡಿದರೂ ನೀವು ಹೊರಗೆ ಹೋಗಬೇಕಾಗುತ್ತದೆ” ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

ಇದಕ್ಕೂ ಮಣಿಯದ ಹುಬ್ಳೀಕರ್‌ “ಮೇಡಂ, ನೀವು ನನಗೆ ಅನ್ಯಾಯ ಮಾಡುತ್ತಿದ್ದೀರಿ. ದೂರುದಾರರಿಗೆ ನೋಟಿಸ್‌ ನೀಡಿದರೆ ಆಗುವ ತೊಂದರೆ ಏನು?” ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ನ್ಯಾಯಾಲಯ “ಭದ್ರತಾ ಸಿಬ್ಬಂದಿ ದಯವಿಟ್ಟು ಇವರನ್ನು ಹೊರಗೆ ಕರೆದೊಯ್ಯಿರಿ” ಎಂದಿತು.

ಇದೆಲ್ಲದರ ನಡುವೆ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ಹುಬ್ಳಿಕರ್ ಅವರೊಂದಿಗೆ ಸಂವಾದ ನಡೆಸಿದರು. ತಮ್ಮ ಪ್ರಕರಣವನ್ನು ಈಗಾಗಲೇ ವಜಾಗೊಳಿಸಲಾಗಿದೆ ಎಂದು ತಿಳಿಹೇಳಿದರು.

ಆಗ ಅವರೇಕೆ ನನ್ನ ಅರ್ಜಿ ವಜಾಗೊಳಿಸಿದರು. ಅವರು ಹೀಗೆ ಮಾಡಬಹುದೇ ಎಂದು ಹುಬ್ಳೀಕರ್‌ ಪ್ರಶ್ನಿಸಿದರು. ಬಳಿಕ ಭದ್ರತಾ ಸಿಬ್ಬಂದಿ ಅವರನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ಯಿತು.

ಕಳೆದ ತಿಂಗಳು ಕೂಡ ಹುಬ್ಳೀಕರ್‌ ಅವರು ಸುಪ್ರೀಂ ಕೋರ್ಟ್‌ ಮತ್ತೊಂದು ಪೀಠದ ಕೋಪಕ್ಕೆ ತುತ್ತಾಗಿದ್ದರು. ನ್ಯಾಯಮೂರ್ತಿ ಗೊಗೋಯ್ ಅವರನ್ನು ಹೇಗೆ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ ಎಂದು ಹುಬ್ಳೀಕರ್‌ ಅವರನ್ನು ಉದ್ದೇಶಿಸಿ ಹಾಲಿ ಸಿಜೆಐ ಡಿ ವೈ ಚಂದ್ರಚೂಡ್‌ ಪ್ರಶ್ನಿಸಿದ್ದರು.

ನ್ಯಾಯಮೂರ್ತಿ ಗೊಗೊಯ್ ಅವರು ಪ್ರಸ್ತುತ ರಾಜ್ಯಸಭೆಯ ಸದಸ್ಯರು. ಅವರು ನವೆಂಬರ್ 2019ರಲ್ಲಿ ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದರು.