ಭಾರತದಲ್ಲಿ ನ್ಯಾಯಾಂಗ ಸೇವೆಗಳಿಗೆ ನೇಮಕಾತಿ ಪಡೆಯಲು ದೃಷ್ಟಿಹೀನ ಅಭ್ಯರ್ಥಿಗಳು ಅರ್ಹರು ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಕೆಲವು ರಾಜ್ಯಗಳ ನ್ಯಾಯಾಂಗ ಸೇವೆಗಳಲ್ಲಿ ಅಂತಹ ಅಭ್ಯರ್ಥಿಗಳಿಗೆ ಮೀಸಲಾತಿ ನಿರಾಕರಿಸುತ್ತಿರುವ ಸಂಬಂಧ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಪ್ರಕರಣ ಸೇರಿದಂತೆ ವಿವಿಧ ಅರ್ಜಿಗಳ ಕುರಿತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠ ಈ ಆದೇಶ ಪ್ರಕಟಿಸಿದೆ.
"ಇದನ್ನು ಅತ್ಯಂತ ಪ್ರಮುಖ ಪ್ರಕರಣವೆಂದು ಪರಿಗಣಿಸಿದ್ದೇವೆ. ಸಾಂವಿಧಾನಿಕ ಚೌಕಟ್ಟು ಮತ್ತು ಸಾಂಸ್ಥಿಕ ಅಸಾಮರ್ಥ್ಯ ತತ್ವವನ್ನೂ ಪರಿಗಣಿಸಿದ್ದೇವೆ... " ಎಂದು ನ್ಯಾ. ಮಹದೇವನ್ ಅವರು ತಿಳಿಸಿದರು.
ನ್ಯಾಯಾಂಗ ಸೇವೆಗಳಲ್ಲಿ ವಿಕಲಚೇತನ ವ್ಯಕ್ತಿಗಳು ಯಾವುದೇ ತಾರತಮ್ಯ ಎದುರಿಸಬಾರದು ಮತ್ತು ಸರ್ಕಾರ ಎಲ್ಲರನ್ನೂ ಒಳಗೊಳ್ಳುವ ನೀತಿ ಒದಗಿಸಲು ದೃಢವಾದ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. "ಯಾವುದೇ ಅಭ್ಯರ್ಥಿಗೆ ಅಂಗವೈಕಲ್ಯದ ಏಕೈಕ ಕಾರಣಕ್ಕೆ ಅಂತಹ ಅವಕಾಶವನ್ನು ನಿರಾಕರಿಸುವಂತಿಲ್ಲ " ಎಂದು ಅದು ತಿಳಿಸಿದೆ.
ದೃಷ್ಟಿದೋಷವುಳ್ಳ ಅಭ್ಯರ್ಥಿಗಳು ರಾಜ್ಯ ನ್ಯಾಯಾಂಗ ಸೇವೆಗಳಲ್ಲಿ ನೇಮಕಾತಿ ಪಡೆಯುವುದನ್ನು ತಡೆ ಹಿಡಿದಿದ್ದ ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿ ವಿರುದ್ಧ ದೃಷ್ಟಿದೋಷವುಳ್ಳ ಅಭ್ಯರ್ಥಿಯ ತಾಯಿಯೊಬ್ಬರು ಕಳೆದ ವರ್ಷ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರು. ಪತ್ರವನ್ನು ಸುಪ್ರೀಂ ಕೋರ್ಟ್‌ಸ್ವಯಂಪ್ರೇರಿತ ಅರ್ಜಿಯಾಗಿ ಪರಿವರ್ತಿಸಿತ್ತು. ಜೊತೆಗೆ ಸಂಬಂಧಿತ ಅರ್ಜಿಗಳನ್ನೂ ಅದು ಕೈಗೆತ್ತಿಕೊಂಡಿತ್ತು.
ಗಂಭೀರ ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳು ಮತ್ತು ಕಡಿಮೆ ಗೋಚರತೆ ಹೊಂದಿರುವವರು ನ್ಯಾಯಾಂಗಕ್ಕೆ ಸೇರಲು ಅವಕಾಶ ನೀಡದ ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳ ನಿಯಮ 6A ಅನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ.
ಇದೇ ವೇಳೆ ನ್ಯಾಯಾಲಯವು ದೃಷ್ಟಿದೋಷವುಳ್ಳ ಅಭ್ಯರ್ಥಿಗಳು ನ್ಯಾಯಾಂಗ ಸೇವೆಗೆ ಸೇರಲು ಮೂರು ವರ್ಷ ವಕೀಲಿಕೆ ಮಾಡಿರಬೇಕು ಎನ್ನುವ ನಿಯಮವನ್ನು ಸಹ ರದ್ದುಗೊಳಿಸಿತು.
ಮಧ್ಯಪ್ರದೇಶದ ದೃಷ್ಟಿದೋಷ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಎಂದು ಆದೇಶಿಸಿದ ನ್ಯಾಯಾಲಯ ಇದೇ ರೀತಿಯ ರಾಜಸ್ಥಾನದ ಅಭ್ಯರ್ಥಿಗಳಿಗೂ ಇದೇ ಬಗೆಯ ಪರಿಹಾರ ನೀಡಿತು.