Army (picture for representative purpose) 
ಸುದ್ದಿಗಳು

ತರಬೇತಿ ವೇಳೆಯೇ ಅಂಗವೈಕಲ್ಯಕ್ಕೆ ತುತ್ತಾಗುವ ಸೈನಿಕರ ಸಂಕಷ್ಟ: ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ

ಅಂತಹ ಅಭ್ಯರ್ಥಿಗಳು ಮರಳಿ ದೈಹಿಕವಾಗಿ ಸದೃಢವಾದರೆ ಅವರನ್ನು ರಕ್ಷಣಾ ಪಡೆಗೆ ಸೇರಿಸಿಕೊಳ್ಳಬಹುದೇ ಅಥವಾ ಬೇರೆ ರೀತಿಯ ಪುನರ್ವಸತಿ ಕಲ್ಪಿಸಬಹುದೇ ಎಂಬ ಕುರಿತು ಪರಿಶೀಲಿಸಲಾಗುವುದು ಎಂದಿರುವ ಪೀಠ.

Bar & Bench

ಸೇನಾ ತರಬೇತಿ ಅವಧಿಯಲ್ಲಿ ಅಂಗವೈಕಲ್ಯಕ್ಕೆ ತುತ್ತಾಗುವ ಸೇನಾ ಅಭ್ಯರ್ಥಿಗಳು ಎದುರಿಸುವ ತೊಂದರೆ ಪರಿಹರಿಸುವುದಕ್ಕಾಗಿ ತಾನು ದಾಖಲಿಸಿಕೊಂಡಿರು ಸ್ವಯಂ ಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ಪತ್ರಿಕೆಯ ವರದಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.‌ ಹಾಗೆ ಅಂಗವೈಕಲ್ಯಕ್ಕೆ ತುತ್ತಾಗುವ ಅಭ್ಯರ್ಥಿಗಳಿಗೆ ನೀಡುವ ಮಾಸಿಕ ಪರಿಹಾರ ಹೆಚ್ಚಿಸಬಹುದೇ, ಅವರಿಗೆ ವಿಮೆ ರಕ್ಷಣೆ ನೀಡಬಹುದೇ, ಗಾಯಗೊಂಡವರ ಚಿಕಿತ್ಸೆ ನಿರ್ದಿಷ್ಟ ಹಂತಕ್ಕೆ ಬಂದ ಬಳಿಕ ಅವರನ್ನು ಮರುಮೌಲ್ಯಮಾಪನ ಮಾಡಿ, ಪುನರ್ವಸತಿಗಾಗಿ ಸೂಕ್ತ ತರಬೇತಿ ನೀಡಬಹುದೇ  ಮತ್ತು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯಿದೆ- 2016ರ ಅಡಿಯಲ್ಲಿ ಅವರ ಹಕ್ಕುಗಳ ವ್ಯಾಪ್ತಿ  ಏನು ಎಂಬುದು ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸುವುದಾಗಿ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಹೇಳಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಐಶ್ವರ್ಯಾ ಭಾಟಿ ಈ ಸಂಬಂಧ, ಸಮಗ್ರ ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದಾರೆ. ಅಭ್ಯರ್ಥಿಗಳ ಪರ ವಕೀಲರು ಭಾಟಿ ಅವರಿಗೆ ತಮ್ಮ ಸಲಹೆಗಳನ್ನು ನೀಡಬಹುದು ಎಂದು ನ್ಯಾಯಾಲಯ ತಿಳಿಸಿತು.

ಅಂತೆಯೇ ರಕ್ಷಣಾ ಸಚಿವಾಲಯ, ಹಣಕಾಸು ಸಚಿವಾಲಯ (ರಕ್ಷಣಾ ಇಲಾಖೆ), ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು, ಸೇನಾ ಸಿಬ್ಬಂದಿ ಮುಖ್ಯಸ್ಥರು, ವಾಯುಪಡೆ ಮುಖ್ಯಸ್ಥರು, ನೌಕಾಪಡೆ ಮುಖ್ಯಸ್ಥರು, ರಕ್ಷಣಾ ಸಚಿವಾಲಯದ ಮಾಜಿ ಸೈನಿಕರ ಕಲ್ಯಾಣ ಇಲಾಖೆ ಮತ್ತು ಸಾಮಾಜಿಕ ನ್ಯಾಯ ಸಚಿವಾಲಯದ ಅಂಗವೈಕಲ್ಯ ಇಲಾಖೆಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 4ರಂದು ನಡೆಯಲಿದೆ.

ತಮ್ಮ ಕಕ್ಷಿದಾರರು ಎದುರಿಸುತ್ತಿರುವ  ಸಂಕಷ್ಟಗಳನ್ನು ಅಭ್ಯರ್ಥಿಗಳ ಪರ ವಕೀಲರು ವಿವರಿಸಿದರು. ಅವರ ಮಾತುಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದ ನ್ಯಾಯಾಲಯ “ ಅಂಗವೈಕಲ್ಯಕ್ಕೆ ತುತ್ತಾಗದೆ ಇದ್ದಿದ್ದರೆ ಅವರು ಸೇನಾಪಡೆಗಳಿಗೆ ಸೇರ್ಪಡೆಗೊಳ್ಳುತ್ತಿದ್ದರು.  ತಮ್ಮ‌ ನಿರ್ಲಕ್ಷ್ಯದ ಕಾರಣಕ್ಕಾಗಿ ಅಲ್ಲದೆ ತರಬೇತಿ ಅವಧಿಯಲ್ಲಿ ಅಪಘಾತಕ್ಕೀಡಾಗುವುದು ದುರದೃಷ್ಟಕರ. ಅಂತಹ ಜನರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಕೇಂದ್ರದಿಂದ ಅವರು ಸೂಚನೆ ಪಡೆಯಬಹುದು. ಅವರು ಮಾಜಿ ಸೈನಿಕರ ಸ್ಥಾನ ಪಡೆಯದಿದ್ದರೂ ಅವರಿಗೆ ಕೆಲ ಸೌಲಭ್ಯಗಳು ದೊರೆಯುವಂತಾಗಬೇಕು” ಎಂದಿತು.

ಅವರನ್ನು ಮತ್ತೆ ರಕ್ಷಣಾ ಪಡೆಗೆ ಸೇರಿಸಿಕೊಳ್ಳಬಹುದೇ ಅಥವಾ ಬೇರೆ ರೀತಿಯ ಪುನರ್ವಸತಿ ಕಲ್ಪಿಸಬಹುದೇ ಎಂಬ ಕುರಿತು ಪರಿಶೀಲಿಸಲಾಗುವುದು ಎಂದು ಅದು ಹೇಳಿದೆ.

ʼಕೆಲವು ಸಂದರ್ಭಗಳಲ್ಲಿ ಅಂತಿಮವಾಗಿ ರಕ್ಷಣಾ ಪಡೆಗಳ ಸೇವೆಗೆ ಸೇರುವುದು ಸಾಧ್ಯವಾಗದೆ ಹೋಗಬಹುದು. ಅವರನ್ನು ಮರಳಿ ಸೇವೆಗೆ ಸೇರ್ಪಡೆ ಮಾಡಿಕೊಳ್ಳಬಹುದೇ ಎಂಬ ಬಗ್ಗೆ ಎಂತಹ ಪರಿಶೀಲನೆ ಅಗತ್ಯವಿದೆ ಎಂಬುದನ್ನು ನೋಡಬೇಕು. ಅವರು ಸೇವೆಗೆ ಮರಳಲು ಸಾಧ್ಯವಾಗದೆ ಹೋದರೆ ಅವರಿಗೆ ಎಂತಹ ಸವಲತ್ತುಗಳನ್ನು ನೀಡಬೇಕು ಎಂಬುದನ್ನು ಪರಿಶೀಲಿಸಬೇಕಿದೆ. ಅವರು ಡೆಸ್ಕ್‌ ಕೆಲಸದಂತಹ ಯಾವುದೇ ಪೂರಕ ಸೇವೆಗೆ ಮರಳಲು ಸಾಧ್ಯವಾಗುವುದಾದರೆ ಅಥವಾ ಇನ್ನಾವುದೇ ರೀತಿಯಲ್ಲಿ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗುವುದಾದರೆ ಅವರಿಗೆ ತರಬೇತಿ ನೀಡುವಂತಾಗಬೇಕು ಎಂದು ನ್ಯಾಯಾಲಯ ವಿವರಿಸಿತು.

ಇದೇ ವೇಳೇ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಇದೇ ರೀತಿಯ ಪ್ರಕರಣಗಳಲ್ಲಿ ಹಸ್ತಕ್ಷೇಪ ಮಾಡದಿರಲು ನ್ಯಾಯಾಲಯ ನಿರ್ಧರಿಸಿತು.