
ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಲಾದ ಸೇನಾ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಕುರೇಷಿ ಅವರನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವ ಕುವರ್ ವಿಜಯ್ ಶಾ ನೀಡಿದ ಹೇಳಿಕೆಗಳ ತನಿಖೆ ನಡೆಸುವುದಕ್ಕಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನಾಳೆಯೊಳಗೆ ಮಧ್ಯಪ್ರದೇಶ ಕೇಡರ್‌ನ ಆದರೆ ರಾಜ್ಯದ ಹೊರಗೆ ಕಾರ್ಯ ನಿರ್ವಹಿಸುತ್ತಿರುವ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಆದೇಶಿಸಿದೆ. ಈ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು ಐಜಿ ಅಥವಾ ಡಿಜಿಪಿ ಶ್ರೇಣಿಯ ಅಧಿಕಾರಿ ಇರಬೇಕು ಎಂದು ತಿಳಿಸಿದೆ.
ಇದೊಂದು ಅಗ್ನಿ ಪರೀಕ್ಷೆ ಎಂದಿರುವ ನ್ಯಾಯಾಲಯ ರಾಜ್ಯ ಸರ್ಕಾರ ಎಸ್‌ಐಟಿ ವರದಿಯನ್ನು ತನಗೆ ಸಲ್ಲಿಸಬೇಕು ಎಂದು ಸೂಚಿಸಿದೆ. ಈ ಮಧ್ಯೆ ಶಾ ಕೋರಿದ್ದ ಕ್ಷಮಾಪಣೆಯನ್ನು ತಿರಸ್ಕರಿಸಿದ ನ್ಯಾಯಾಲಯ ತನಿಖೆ ಎದುರಿಸುವಂತೆ ಸೂಚಿಸಿತು. ಕ್ಷಮಾಪಣೆ ಕೋರಲು ಶಾ ನ್ಯಾಯಾಂಗ ನಿಂದನೆ ಮಾಡಿಲ್ಲ ಎಂದ ಅದು ಒಂದಿನಿತೂ ಯೋಚಿಸದೆ ಈ ರೀತಿಯ ಹೇಳಿಕೆ ನೀಡಿದ್ದೀರಿ, ನಮಗೆ ನಿಮ್ಮ ಕ್ಷಮೆಯಾಚನೆಯ ಅಗತ್ಯವಿಲ್ಲ. ಇದು ಪರಿಣಾಮಗಳಿಂದ ತಪ್ಪಿಸಿಕೊಳ್ಳುವ ಯತ್ನ ಎಂದಿತು. ಇದೇ ವೇಳೆ ಅವರನ್ನು ಬಂಧಿಸುವುದರಿಂದ ರಕ್ಷಣೆಯನ್ನು ನೀಡಿತು.
ಶಾ ಅವರ ಕೃತ್ಯಗಳು ಸಾರ್ವಜನಿಕವಾಗಿ ಬಹಿರಂಗಗೊಂಡಿದ್ದು, ಅವರು ತಮ್ಮ ಕೃತ್ಯಗಳನ್ನು ಒಪ್ಪಿಕೊಳ್ಳುವಷ್ಟು ವಿವೇಕ ತೋರಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಪಾಕಿಸ್ತಾನದ ವಿರುದ್ಧ ಭಾರತ ಇತ್ತೀಚೆಗೆ ನಡೆಸಿದ ಗಡಿಯಾಚೆಗಿನ ಸೇನಾ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸೇನಾ ಅಧಿಕಾರಿಗಳಲ್ಲಿ ಕರ್ನಲ್ ಕುರೇಷಿ ಒಬ್ಬರು. ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಶಾ ಬಣ್ಣಿಸಿದ್ದರು.
ಶಾ ಹೇಳಿಕೆ ಕುರಿತು ನ್ಯಾಯಾಲಯದ ಅವಲೋಕನಗಳು
ಇಡೀ ದೇಶವೇ ನಿಮ್ಮಿಂದಾಗಿ ನಾಚಿಕೆಪಡುತ್ತಿದೆ, ನಿಮ್ಮನ್ನು ನೀವು ಹೇಗೆ ಸುಧಾರಿಸಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟದ್ದು.
ನಮಗೆ ಕ್ಷಮೆಯಾಚನೆ ಅಗತ್ಯವಿಲ್ಲ. ನೀವು ಏನನ್ನೋ ಮಾಡಿ ಬಂದು ನಂತರ ನ್ಯಾಯಾಲಯದ ಕ್ಷಮೆ ಕೋರುತ್ತೀರಿ. ಇದೇನಾ ನಡೆದುಕೊಳ್ಳುವ ರೀತಿ?
'ಕ್ಷಮೆಯಾಚನೆ' ಎಂಬ ಪದಕ್ಕೆ ಸ್ವಲ್ಪ ಅರ್ಥವಿದೆ. ಕೆಲವೊಮ್ಮೆ ಜನು ತುಂಬಾ ಸೌಮ್ಯ ಭಾಷೆಯಲ್ಲಿ, ಪರಿಣಾಮಗಳಿಂದ ಹೊರಬರಲು ಬಹಳ ಕೃತಕ ರೀತಿಯ ಕ್ಷಮೆಯಾಚಿಸುತ್ತಾರೆ.
ಕೆಲವೊಮ್ಮೆ ಜನ ಮೊಸಳೆ ಕಣ್ಣೀರು ಸುರಿಸುತ್ತಾರೆ.
ನೀವು ಸಾರ್ವಜನಿಕ ವ್ಯಕ್ತಿ. ನೀವು ಮಾತನಾಡುವಾಗ ಅಳೆದು ತೂಗಿ ಮಾತನಾಡಬೇಕಿತ್ತು.
ನೀವು ತುಂಬಾ ನಿಂದನೀಯ ಭಾಷೆ ಬಳಸಿದ್ದೀರಿ.
ಶಾ ಅವರ ಹೇಳಿಕೆಗಳು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತಂದಿವೆ.