Supreme Court
Supreme Court 
ಸುದ್ದಿಗಳು

ನ್ಯಾಯಾಲಯಗಳಲ್ಲಿ ಸರಳ ಇಂಗ್ಲಿಷ್‌ ಬಳಕೆಗೆ ಒತ್ತಾಯಿಸಿ ಅರ್ಜಿ: ಕೇಂದ್ರಕ್ಕೆ ನೋಟಿಸ್‌ ನೀಡಿದ ಸುಪ್ರೀಂಕೋರ್ಟ್‌

Bar & Bench

ಕಾನೂನುಗಳು, ಸರ್ಕಾರಿ ಆದೇಶ, ಅಧಿಸೂಚನೆ ಇತ್ಯಾದಿಗಳಲ್ಲಿ ಸರಳ ಭಾಷೆ ಬಳಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಗುರುವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ನೋಟಿಸ್‌ ಜಾರಿ ಮಾಡಿತು.

ಸಿಜೆಐ ಎಸ್‌ಎ ಬೊಬ್ಡೆ ವಕೀಲರಿಗೆ, "ನೀವು ಮಾಡಲೇಬೇಕಾದ ಇನ್ನೊಂದು ವಾದವೆಂದರೆ, ಇಂಗ್ಲಿಷ್ ಅನ್ನು ಸರಳವಾಗಿ ಮಾತನಾಡದಿದ್ದರೆ, ಜನರು ಅದನ್ನು ಬಳಸದೆ ದೂರ ಹೋಗುತ್ತಾರೆ ಎನ್ನುವುದು" ಎಂದು ಹೇಳಿದರು.

“ಬಹುತೇಕವಾಗಿ ವಕೀಲರ ಬರವಣಿಗೆ ಎಂಬುದು (1) ಶಬ್ದಾಡಂಬರ, (2) ಅಸ್ಪಷ್ಟತೆ, (3) ತೋರಿಕೆಯ ಹಾಗೂ (4) ನೀರಸ ಬರವಣಿಗೆಯಿಂದ ಕೂಡಿರುತ್ತದೆ" ಎಂಬ ಅಂಶದ ಆಧಾರದ ಮೇಲೆ ಅರ್ಜಿದಾರರಾದ ವಕೀಲ ಡಾ. ಸುಭಾಷ್ ವಿಜಯರಣ್ ಅವರು ಮನವಿ ಸಲ್ಲಿಸಿದ್ದರು.

ಮೌಖಿಕ ವಾದಗಳು ಮತ್ತು ಶಬ್ದಾಡಂಬರದ ಅರ್ಜಿಗಳ ಯುಗ ಕೊನೆಯಾಗಬೇಕು. ಭಾರತದ ಎಲ್ಲಾ ಕಾನೂನು ಶಾಲೆಗಳಲ್ಲಿ ‘ಸರಳ ಇಂಗ್ಲಿಷಿನಲ್ಲಿ ಕಾನೂನು ಬರವಣಿಗೆ’ ಎಂಬ ವಿಷಯವನ್ನು ಮೂರು ಮತ್ತು ಐದು ವರ್ಷಗಳ ಎಲ್ ಎಲ್‌ಎಲ್‌ಬಿ ಕೋರ್ಸುಗಳಿಗೆ ಕಡ್ಡಾಯವಾಗಿ ಅಳವಡಿಸಬೇಕು. ಅರ್ಜಿಗಳಿಗೆ ನೇರವಾಗಿ ಪುಟ ಮಿತಿ ವಿಧಿಸಬೇಕು ಮತ್ತು ಮೌಖಿಕ ವಾದಕ್ಕೆ ಕಾಲಮಿತಿ ನಿಗದಿಪಡಿಸಬೇಕು. ಎರಡೂ ಕಡೆಯವರ ವಾದಗಳಿಗೆ ಐದರಿಂದ 10 ನಿಮಿಷಗಳು, ಚಿಕ್ಕ ಪ್ರಕರಣಗಳಾಗಿದ್ದರೆ 20 ನಿಮಿಷಗಳು, ಮಧ್ಯಮ ಪ್ರಕರಣಗಳಿಗೆ 30 ನಿಮಿಷಗಳು ಹಾಗೂ ದೀರ್ಘ ಪ್ರಕರಣಗಳಿಗೆ 40ರಿಂದ 60 ನಿಮಿಷಗಳ ಕಾಲಮಿತಿ ವಿಧಿಸಬೇಕು. ಸಾಂವಿಧಾನಿಕ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ, ವಾದದ ಮಿತಿಯನ್ನು ಒಂದು ಗಂಟೆಗೂ ಹೆಚ್ಚುಕಾಲ ಸಡಿಲಿಸಬಹುದು ಇತ್ಯಾದಿ ಸಲಹೆಗಳನ್ನು ಅರ್ಜಿಯಲ್ಲಿ ನೀಡಲಾಗಿತ್ತು.