ಕೊನೆಯಿರದ ವಾದ, ಶಬ್ದಾಡಂಬರದ ಅರ್ಜಿಗಳಿಗೆ ಲಗಾಮು ಹಾಕುವಂತೆ ‘ಸುಪ್ರೀಂ’ಗೆ ಮನವಿ: ಸರಳ ಇಂಗ್ಲಿಷ್ ಬಳಕೆಗೆ ಒತ್ತಾಯ

ಅರ್ಜಿಗಳಿಗೆ ನೇರವಾಗಿ ಪುಟ ಮಿತಿ ವಿಧಿಸಬೇಕು ಮತ್ತು ಮೌಖಿಕ ವಾದಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂದು ಸುಪ್ರೀಂಕೋರ್ಟಿಗೆ ಸಲ್ಲಸಿರುವ ಅರ್ಜಿಯಲ್ಲಿ ಕೋರಲಾಗಿದೆ.
case files
case files

ಸಾಮಾನ್ಯ ಜನರಿಗೆ ಅಗತ್ಯವಾದ ಸರ್ಕಾರಿ ನಿಯಮ, ನಿಬಂಧನೆ, ಅಧಿಸೂಚನೆಗಳಿಗೆ ಸರಳವಾದ ಭಾಷೆ ಬಳಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ, ಸಾಮಾನ್ಯ ಜನರಿಗೆ ಅಗತ್ಯವಿರುವ ಕಾನೂನು ಜ್ಞಾನದ ಮತ್ತು ಕುಂದುಕೊರತೆಗಳ ನಿವಾರಣೆಗೆ ಸಂಬಂಧಿಸಿದ ಮಾರ್ಗದರ್ಶಿ ಪುಸ್ತಕಗಳು ಮತ್ತು ಕೈಪಿಡಿಗಳನ್ನು ಒದಗಿಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೂಡ ಅರ್ಜಿಯಲ್ಲಿ ಕೋರಲಾಗಿದೆ.

Also Read
ಎನ್‌ಆರ್‌ಐ ಕೋಟಾ ಅನುಲ್ಲಂಘನೀಯವೇನೂ ಅಲ್ಲ: ಖಾಸಗಿ ದಂತ, ವೈದ್ಯಕೀಯ ಕಾಲೇಜುಗಳಿಗೆ ಸುಪ್ರೀಂ ಕೋರ್ಟ್ ಬೆಂಬಲ
Also Read
ಒಂದು ವರ್ಷ ಮೀರಿ ಬಂಧನ ವಿಸ್ತರಿಸಬಹುದೇ? ಮೆಹಬೂಬಾ ಮುಫ್ತಿ ಪ್ರಕರಣದಲ್ಲಿ ಕೇಂದ್ರವನ್ನು ಪ್ರಶ್ನಿಸಿದ ಸುಪ್ರೀಂ

“ಬಹುತೇಕವಾಗಿ ವಕೀಲರ ಬರವಣಿಗೆ ಎಂಬುದು (1) ಶಬ್ದಾಡಂಬರ, (2) ಅಸ್ಪಷ್ಟತೆ, (3) ತೋರಿಕೆಯ ಹಾಗೂ (4) ನೀರಸ ಬರವಣಿಗೆಯಿಂದ ಕೂಡಿರುತ್ತದೆ" ಎಂಬ ಅಂಶದ ಆಧಾರದ ಮೇಲೆ ಅರ್ಜಿದಾರರಾದ ವಕೀಲ ಡಾ. ಸುಭಾಷ್ ವಿಜಯರಣ್ ಅವರು ಮನವಿ ಸಲ್ಲಿಸಿದ್ದಾರೆ.

"ಸಾಮಾನ್ಯ ವ್ಯಕ್ತಿಗೆ ವ್ಯವಸ್ಥೆ ಬಗ್ಗೆ ಅರಿವು ಇರುವುದಿಲ್ಲ – ನಿಜವಾಗಿಯೂ ಅದರ ಬಗ್ಗೆ ಅವನಿಗೆ ತಿಳಿವಳಿಕೆ ಕಡಿಮೆ ಏಕೆ? ಏಕೆಂದರೆ ಅವನು ವ್ಯವಸ್ಥೆಯನ್ನಾಗಲೀ ಕಾನೂನುಗಳನ್ನಾಗಲೀ ಅರ್ಥಮಾಡಿಕೊಳ್ಳಲಾರ. ಎಲ್ಲವೂ ತುಂಬಾ ಸಂಕೀರ್ಣವೂ ಗೊಂದಲಮಯವೂ ಆಗಿದೆ. ನಮ್ಮ ದೇಶದಲ್ಲಿ ಕಾನೂನುಗಳನ್ನು ರೂಪಿಸುವ, ಆಚರಿಸುವ ಮತ್ತು ಅಡಳಿತಾತ್ಮಕವಾಗಿ ನಿರ್ವಹಿಸುವ ಪ್ರಕ್ರಿಯೆಯು ನ್ಯಾಯವನ್ನು ನಿರಾಕರಿಸುತ್ತಿದ್ದು ಆ ಮೂಲಕ ದೇಶದ ಜನಸಾಮಾನ್ಯರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುತ್ತಿದೆ” ಎಂದು ಅಳಲು ತೋಡಿಕೊಳ್ಳಲಾಗಿದೆ.

ಸರಳ ಭಾಷೆ ಬಳಸುವ ಪ್ರಾಮುಖ್ಯತೆ ಎತ್ತಿ ತೋರಿಸುತ್ತಾ, ಅರ್ಜಿದಾರರು ಹೀಗೆ ಹೇಳಿದ್ದಾರೆ:

"ವಾಚಾಳಿತನದ, ಸಂಕೀರ್ಣವಾದ ಮತ್ತು ಪಾರಿಭಾಷಿಕ ಪದಗಳನ್ನು ತಪ್ಪಿಸಬೇಕು. ಸಂವಹನಗಳಲ್ಲಿ ಸರಳ ಭಾಷೆ ಬಳಸುವುದರಿಂದ ಅಂತಿಮವಾಗಿ ದಕ್ಷತೆ ತರಬಹುದು. ಇದರಿಂದ ಓದುಗರಿಗೆ ಹೆಚ್ಚು ಅಸ್ಪಷ್ಟತೆ ಇರುವುದಿಲ್ಲ. ಜೊತೆಗೆ ಸ್ಪಷ್ಟೀಕರಣ ಮತ್ತು ವಿವರಣೆಗಳಿಗೆ ಸಮಯ ವ್ಯಯಿಸುವುದು ತಪ್ಪುತ್ತದೆ. ಇದು ನ್ಯಾಯ ಪಡೆಯಲು ಇಡುವ ಹೆಜ್ಜೆ ಕೂಡ”.
ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿರುವ ಅರ್ಜಿ

ಮನವಿಯ ಪ್ರಮುಖಾಂಶಗಳು:

  • ಕೆಟ್ಟದಾಗಿ ಬರೆದ ಮತ್ತು ಶಬ್ದ ಬಾಹುಳ್ಯದ ಅರ್ಜಿಗಳು ಹಾಗೂ ಚರ್ವಿತಚರ್ವಣ ಎನಿಸುವ ಮೌಖಿಕ ವಾದಗಳಿಂದಾಗಿ ನ್ಯಾಯಾಲಯದ ಹಾಗೂ ವಕೀಲರ / ದಾವೆ ಹೂಡುವವರ ಅಮೂಲ್ಯ ಸಮಯ, ಶಕ್ತಿ ಮತ್ತು ಸಂಪನ್ಮೂಲ ವ್ಯರ್ಥವಾಗುತ್ತವೆ ಹೀಗಾಗಿ ಆದ್ಯತೆಗೆ ಒತ್ತು ನೀಡುವ ಮತ್ತು ಪರಿಣಾಮಕಾರಿಯಾಗಿ ಸಂಪನ್ಮೂಲಗಳನ್ನು ಬಳಸುವ ಅವಶ್ಯಕತೆಯಿದೆ.

  • ಈ ನ್ಯಾಯಾಲಯ ನಿಜವಾಗಿಯೂ ಜನಸಾಮಾನ್ಯರ ನ್ಯಾಯಾಲಯವಾಗಬೇಕಾದರೆ - ಮತ್ತು ಕೆಲವೇ ಕೆಲವು ಅದೃಷ್ಟವಂತರ ಪಾಲಿಗೆ ಮಾತ್ರವೆ ಇದೆ ಎಂದು ಅನ್ನಿಸಿಕೊಳ್ಳದೇ ಇರಬೇಕಾದರೆ, ಎಂದೆಂದಿಗೂ ಮುಗಿಯದ ಮೌಖಿಕ ವಾದಗಳು ಮತ್ತು ಶಬ್ದಾಡಂಬರದ ಅರ್ಜಿಗಳ ಯುಗ ಕೊನೆಯಾಗಬೇಕು.

  • ಭಾರತದ ಎಲ್ಲಾ ಕಾನೂನು ಶಾಲೆಗಳಲ್ಲಿ ‘ಸರಳ ಇಂಗ್ಲಿಷಿನಲ್ಲಿ ಕಾನೂನು ಬರವಣಿಗೆ’ ಎಂಬ ವಿಷಯವನ್ನು ಮೂರು ಮತ್ತು ಐದು ವರ್ಷಗಳ ಎಲ್ ಎಲ್ ಬಿ ಕೋರ್ಸುಗಳಿಗೆ ಕಡ್ಡಾಯವಾಗಿ ಅಳವಡಿಸಬೇಕಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ವಕೀಲರ ಪರಿಷತ್ತಿಗೆ (ಬಿಸಿಐ) ನ್ಯಾಯಾಲಯ ನಿರ್ದೇಶನ ನೀಡಬೇಕು.

  • ಅರ್ಜಿಗಳಿಗೆ ನೇರವಾಗಿ ಪುಟ ಮಿತಿ ವಿಧಿಸಬೇಕು ಮತ್ತು ಮೌಖಿಕ ವಾದಕ್ಕೆ ಕಾಲಮಿತಿ ನಿಗದಿಪಡಿಸಬೇಕು.

“ಎರಡೂ ಕಡೆಯವರ ವಾದಗಳಿಗೆ ಐದರಿಂದ 10 ನಿಮಿಷಗಳು, ಚಿಕ್ಕ ಪ್ರಕರಣಗಳಾಗಿದ್ದರೆ 20 ನಿಮಿಷಗಳು, ಮಧ್ಯಮ ಗಾತ್ರದ ಪ್ರಕರಣಗಳಿಗೆ 30 ನಿಮಿಷಗಳು ಹಾಗೂ ದೀರ್ಘ ಪ್ರಕರಣಗಳಿಗೆ 40ರಿಂದ 60 ನಿಮಿಷಗಳ ಕಾಲಮಿತಿ ವಿಧಿಸಬೇಕು. ಸಾಂವಿಧಾನಿಕ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ, ವಾದದ ಮಿತಿಯನ್ನು ಒಂದು ಗಂಟೆಗೂ ಹೆಚ್ಚುಕಾಲ ಸಡಿಲಿಸಬಹುದು” ಎಂದು ಅರ್ಜಿಯಲ್ಲಿ ಸಲಹೆ ರೂಪದ ಮನವಿ ಮಾಡಲಾಗಿದೆ.

ಅಕ್ಟೋಬರ್ 15ಕ್ಕೆ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ.

Related Stories

No stories found.
Kannada Bar & Bench
kannada.barandbench.com