ಸುದ್ದಿಗಳು

ಮಧ್ಯಪ್ರದೇಶ ನಿವೃತ್ತ ಸಿಎಸ್‌ ಗೋಪಾಲರೆಡ್ಡಿ ನಿರೀಕ್ಷಣಾ ಜಾಮೀನು ರದ್ದತಿ ಕೋರಿ ಅರ್ಜಿ; ಸುಪ್ರೀಂನಿಂದ ನೋಟಿಸ್

Bar & Bench

ಮಧ್ಯಪ್ರದೇಶ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇ- ಟೆಂಡರ್‌ ಮೂಲಕ ನಡೆದ ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ (ಚೀಫ್‌ ಸೆಕ್ರೆಟರಿ) ಎಂ ಗೋಪಾಲ್ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ತೆಲಂಗಾಣ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಈ ನೋಟಿಸ್‌ ಜಾರಿಗೊಳಿಸಲಾಗಿದೆ.

ಮುಂದಿನ ವಿಚಾರಣೆಯೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಆರೋಪಿಗೆ ಸೂಚಿಸಿ ನೋಟಿಸ್‌ ಜಾರಿ ಮಾಡಿದೆ. ಆರೋಪಿಗಳ ಪರ ವಕೀಲರಾದ ಮುಕುಲ್ ರೋಹಟ್ಗಿ ಮತ್ತು ವಿಕಾಸ್ ಸಿಂಗ್ ಅವರು ಕೇವಿಯೆಟ್‌ ಸಲ್ಲಿಸಿದ್ದಾರೆ.

“ಅಕ್ರಮ ಹಣ ವರ್ಗಾವಣೆ ಚಟುವಟಿಕೆಗಳಿಂದ ಸಾರ್ವಜನಿಕ ಬೊಕ್ಕಸ ಮತ್ತು ದೇಶದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿವಿಧ ಸಂಸ್ಥೆಗಳು ದೇಶದಲ್ಲಿ ಹೂಡಿಕೆ ಮಾಡದಂತೆ ನಿರುತ್ಸಾಹ ಮೂಡಿಸುತ್ತದೆ. ಅಪರಾಧಗಳು ಅಕ್ರಮ ಹಣ ತಡೆ ಕಾಯಿದೆಯಡಿ ಬಂಧನಾರ್ಹವಾಗಿದ್ದು ಜಾಮೀನುರಹಿತವಾಗಿವೆ. ಹೀಗಾಗಿ ಕಾಯಿದೆಯಡಿ ಜಾಮೀನಿಗೆ ಕಠಿಣ ಷರತ್ತು ವಿಧಿಸಬೇಕು ಎಂದು ಇ ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಜಯಂತ್‌ ಕೆ ಸೂದ್‌ ಕೋರಿದರು.