ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಪ್ರಮುಖ ಆರೋಪಿಯಾಗಿರುವ ಐಷಾರಾಮಿ ಹಡಗು ಮಾದಕವಸ್ತು ಪ್ರಕರಣದ ಸಹ ಆರೋಪಿ ನೂಪುರ್ ಸತಿಜಾ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಮುಂಬೈ ನ್ಯಾಯಾಲಯ “ಆರೋಪಿಯ ವಿರುದ್ಧ ನಡೆಸಲಾದ ಶೋಧ ಮತ್ತು ಮಾದಕ ವಸ್ತು ವಶಪಡಿಸಿಕೊಳ್ಳುವಿಕೆ ಕಾನೂನುಬಾಹಿರವಾದುದು” ಎಂದು ತರ್ಕಿಸಿದೆ. (ನೂಪುರ್ ಸತೀಜಾ ಮತ್ತಿತರರು ಹಾಗೂ ಭಾರತ ಒಕ್ಕೂಟ).
ಇತರ 8 ಆರೋಪಿಗಳೊಂದಿಗೆ ಸತೀಜಾ ಅವರಿಗೆ ಅಕ್ಟೋಬರ್ 30 ರಂದು ಜಾಮೀನು ನೀಡಲಾಗಿತ್ತು. ಆದರೆ ಆಕೆ ಮತ್ತು ಸಹ ಆರೋಪಿ ಗೋಮಿತ್ ಚೋಪ್ರಾಗೆ ಜಾಮೀನು ನೀಡಿದ 15 ಪುಟಗಳ ಆದೇಶ ಪ್ರತಿ ಶುಕ್ರವಾರವಷ್ಟೇ ಲಭ್ಯವಾಗಿದೆ.
ಮಧ್ಯಮ ಪ್ರಮಾಣದ ಮಾದಕವಸ್ತುಗಳೊಂದಿಗೆ ಇಬ್ಬರನ್ನೂ ಎನ್‌ಸಿಬಿ ಬಂಧಿಸಿತ್ತು. ನೂಪುರ್ ಅವರ ಕೊಠಡಿಯಿಂದ 1.59 ಗ್ರಾಂ ತೂಕದ 4 ಎಕ್ಟಾಸಿ ಮಾತ್ರೆಗಳನ್ನು ಮತ್ತು ಛೋಪ್ರಾ ಅವರ ಬಳಿಯಿಂದ 3 ಗ್ರಾಂ ಕೊಕೇನ್, 4 ಎಂಡಿಎಂಎ (ಎಕ್ಟಾಸಿ) ಮಾತ್ರೆಗಳು ಹಾಗೂ ₹ 93,000 ಹಣ ವಶಪಡಿಸಿಕೊಳ್ಳಲಾಗಿತ್ತು.
ನೂಪರ್ ಪರವಾಗಿ ವಕೀಲ ಅಯಾಜ್ ಖಾನ್, ಛೋಪ್ರಾ ಪರವಾಗಿ ವಕೀಲ ಕುಶಾಲ್ ಮೋರ್, ಎನ್‌ಸಿಬಿ ಪರವಾಗಿ ಎ ಎಂ ಚಿಮಾಲ್ಕರ್ ಮತ್ತು ಅದ್ವೈತ್ ಸೇಠ್ನಾ ವಾದ ಮಂಡಿಸಿದ್ದರು.
ಇಬ್ಬರೂ ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯ ವಾಟ್ಸಾಪ್ ಸಂಭಾಷಣೆ ಕೇವಲ ಮಾದಕವಸ್ತು ಸೇವನೆಯ ಸುಳಿವು ನೀಡುತ್ತವೇಯೇ ವಿನಾ ,ಮಾರಾಟ ಅಥವಾ ಖರೀದಿಯ ವಿವರಗಳನ್ನಲ್ಲ ಎಂದು ನ್ಯಾಯಾಲಯ ಹೇಳಿತು. ಅಲ್ಲದೆ ಬಾಂಬೆ ಹೈಕೋರ್ಟ್ ಈಗಾಗಲೇ ಆರ್ಯನ್ ಖಾನ್ ಮತ್ತು ಇತರ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದ್ದು ಸಮಾನತೆಯ ಆಧಾರದಲ್ಲಿ ಅರ್ಜಿದಾರರಿಗೂ ಜಾಮೀನು ನೀಡಬೇಕು ಎಂದು ಅಭಿಪ್ರಾಯಪಟ್ಟಿತು.
ದಾಖಲೆಯಲ್ಲಿ ಲಭ್ಯವಿರುವ ಅಂಶಗಳನ್ನು ಪರಿಗಣಿಸಿ ಮೇಲ್ನೋಟಕ್ಕೆ ಪಿತೂರಿ ನಡೆದಿದೆ ಎನ್ನಲಾಗದು ಎಂದು ನ್ಯಾಯಾಲಯ ಹೇಳಿದ್ದು ಇಬ್ಬರೂ ಆರೋಪಿಗಳಿಗೆ ಜಾಮೀನು ನೀಡಿತು.
ನೂಪುರ್ ಅವರ ಪ್ರಕರಣದಲ್ಲಿ ಮಹಿಳಾ ಪಂಚರೊಬ್ಬರು ಶೋಧ ಕಾರ್ಯ ನಡೆಸಿದ್ದು ಅವರು ಅಧಿಕೃತ ಅಧಿಕಾರಿಯಲ್ಲದ ಕಾರಣ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 42ನ್ನು ಉಲ್ಲಂಘಿಸಲಾಗಿದ್ದು ಆರೋಪಿ ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
“ಮಾದಕವಸ್ತುಗಳ ಅಕ್ರಮ ವಶ ಮತ್ತು ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 42ರ ಉಲ್ಲಂಘನೆ ಆಗಿರುವುದರಿಂದಲೂ ಆಕೆ (ನೂಪುರ್) ಜಾಮೀನು ಪಡೆಯಲು ಅರ್ಹರಾಗಿದ್ದಾರೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.