ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಅವರು ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ವೇಳೆ ಹೃದಯಾಘಾತವಾಗಿದ್ದು, ಚಿಕಿತ್ಸೆಗಾಗಿ ದೆಹಲಿಗೆ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ.
ಶಾ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಸುಪ್ರೀಂ ಕೋರ್ಟ್ ವಕೀಲ ಹಾಗೂ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಈ ಮಾಹಿತಿ ಟ್ವೀಟ್ ಮಾಡಿದ್ದಾರೆ.
ಈ ನಡುವೆ ನ್ಯಾಯಮೂರ್ತಿ ಶಾ ಅವರೇ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದು, ದೇವರ ದಯೆಯಿಂದ ನನ್ನ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.
1982ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ನಂತರ, ನ್ಯಾಯಮೂರ್ತಿ ಶಾ ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದರು. ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಅವರು ಸಿಬಿಐ ಪರವಾಗಿಯೂ ವಾದ ಮಂಡಿಸಿದ್ದಾರೆ. ಸಾಂವಿಧಾನಿಕ ಕಾನೂನು, ಕೇಂದ್ರೀಯ ಅಬಕಾರಿ ಮತ್ತು ಸುಂಕ ಕಾನೂನಿನಲ್ಲಿ ಅವರು ಪರಿಣತರು.
ಗುಜರಾತ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2004ರಲ್ಲಿ ಶಾ ಅವರು ನೇಮಕಗೊಂಡರು. ಅದಾದ ಒಂದು ವರ್ಷಕ್ಕೆ, ಅವರ ನೇಮಕಾತಿಯನ್ನು ಖಾಯಂಗೊಳಿಸಲಾಯಿತು. ಆಗಸ್ಟ್ 2018 ರಲ್ಲಿ, ಶಾ ಅವರನ್ನು ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಯಿತು. ನವೆಂಬರ್ 2, 2018ರಂದು ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಮೇ 15, 2023ರಂದು ನಿವೃತ್ತರಾಗಲಿದ್ದಾರೆ.
ನ್ಯಾ. ಶಾ ಅವರು ತಮ್ಮ ಆರೋಗ್ಯದ ಕುರಿತು ಹಂಚಿಕೊಂಡಿರುವ ವೀಡಿಯೊ ಇಲ್ಲಿದೆ: