Laapataa Ladies  
ಸುದ್ದಿಗಳು

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗಾಗಿ ‘ಲಾಪತಾ ಲೇಡಿಸ್’ ಸಿನಿಮಾ ಪ್ರದರ್ಶನ ಏರ್ಪಡಿಸಿದ ಸಿಜೆಐ: ನಟ ಆಮಿರ್ ಖಾನ್ ಭಾಗಿ

ಸುಪ್ರೀಂ ಕೋರ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ವರ್ಷ ಪೂರ್ತಿ ಲಿಂಗ ಸಂವೇದನೆ ಕಾರ್ಯಕ್ರಮದ ಭಾಗವಾಗಿದೆ ಈ ಪ್ರದರ್ಶನ.

Bar & Bench

ಭಾರತದ ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿ ವೈ ಚಂದ್ರಚೂಡ್‌ ಅವರ ಸೂಚನೆಯಂತೆ ಸುಪ್ರೀಂ ಕೋರ್ಟ್‌ ಸಂವಹನ ವಿಭಾಗ ಶುಕ್ರವಾರ ನ್ಯಾಯಾಲಯದ ಎಲ್ಲಾ ನ್ಯಾಯಮೂರ್ತಿಗಳು ಅವರ ಕುಟುಂಬ ಸದಸ್ಯರು ಹಾಗೂ ರಿಜಿಸ್ಟ್ರಿ ಸದಸ್ಯರಿಗಾಗಿ ಹಿಂದಿ ಚಲನಚಿತ್ರ ʼಲಾಪತಾ ಲೇಡಿಸ್ʼ ಪ್ರದರ್ಶನ ಆಯೋಜಿಸುತ್ತಿದೆ.

ಪ್ರದರ್ಶನದಲ್ಲಿ ಚಿತ್ರದ ನಿರ್ಮಾಪಕ ಹಾಗೂ ಬಾಲಿವುಡ್ ಹಿರಿಯ ನಟ ಆಮಿರ್‌ ಖಾನ್ ಮತ್ತು ಸಿನಿಮಾದ ನಿರ್ದೇಶಕಿ ಕಿರಣ್ ರಾವ್ ಕೂಡ ಭಾಗವಹಿಸಲಿದ್ದಾರೆ. ಸುಪ್ರೀಂ ಕೋರ್ಟ್‌ ಆಡಳಿತ ಕಟ್ಟಡ ಸಂಕೀರ್ಣದ ಸಭಾಂಗಣದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವರ್ಷ ಪೂರ್ತಿ ಹಮ್ಮಿಕೊಳ್ಳಲಾಗಿರುವ ಲಿಂಗ ಸಂವೇದನೆ ಕಾರ್ಯಕ್ರಮದ ಭಾಗವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಚಿತ್ರ ವೀಕ್ಷಿಸಿದ್ದ ಸಿಜೆಐ ಚಂದ್ರಚೂಡ್ ಅವರ ಪತ್ನಿ ಕಲ್ಪನಾ ದಾಸ್ ಅದನ್ನು ಸುಪ್ರೀಂ ಕೋರ್ಟ್ ಸಿಬ್ಬಂದಿಗೆ ತೋರಿಸುವ ಇಂಗಿತ ವ್ಯಕ್ತಪಡಿಸಿದ್ದರು.

"ಸುಪ್ರೀಂಕೋರ್ಟ್ ಸಿಬ್ಬಂದಿಯನ್ನು ಸಂವೇದನಾಶೀಲಗೊಳಿಸುವುದು ನನ್ನ ಯೋಜನೆಯ ಉದ್ದೇಶವಾಗಿದ್ದು ಅದಕ್ಕಾಗಿ ಈ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇಂತಹ ಅನೇಕ ವಿಷಯಗಳು ನಡೆಯುತ್ತಿದ್ದರೂ ಅವುಗಳಿಗೆ ಹೆಚ್ಚು ಪ್ರಚಾರ ದೊರೆಯುವುದಿಲ್ಲ. ಈಗ ನಮ್ಮಲ್ಲಿಯೂ ಕೂಡ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ  ಆಯುರ್ವೇದ ಕ್ಲಿನಿಕ್‌ ಇದೆ. ಅಂತೆಯೇ ಈ ಪ್ರದರ್ಶನ ಕೂಡ ಭಾವಪೂರ್ಣ ಅನುಭವಗಳ ವಿನಿಮಯವಾಗುತ್ತದೆ” ಎಂದು ಸಿಜೆಐ ಅವರು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದರು.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಮಾರ್ಚ್ 1ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾದಾಗ ಉತ್ತಮ ವಿಮರ್ಶೆಗೆ ಭಾಜನವಾಗಿತ್ತು.

ಚಿತ್ರವನ್ನು ಸೆಪ್ಟೆಂಬರ್ 2023 ರಲ್ಲಿ 48 ನೇ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಪ್ರದರ್ಶಿಸಲಾಗಿತ್ತು.