ಸುದ್ದಿಗಳು

ಮದ್ರಾಸ್ ಹೈಕೋರ್ಟ್‌ನ ಕೊಲೆ ಆಪಾದನೆ ಹೇಳಿಕೆ: ಚುನಾವಣಾ ಆಯೋಗದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Bar & Bench

ನ್ಯಾಯಾಲಯ ಕಲಾಪಗಳ ವರದಿ ಬಗ್ಗೆ ದೂರು ನೀಡುವುದಕ್ಕಿಂತ ಸಾಂವಿಧಾನಿಕ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿರುವ ಸುಪ್ರೀಂಕೋರ್ಟ್‌ ಗುರುವಾರ ಮದ್ರಾಸ್‌ ಹೈಕೋರ್ಟ್‌ನ ಕೊಲೆ ಆಪಾದನೆ ಹೇಳಿಕೆ ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

“ದೇಶದ ಕೋವಿಡ್‌ ಸ್ಥಿತಿಗೆ ಕೇಂದ್ರ ಚುನಾವಣಾ ಆಯೋಗವೇ ಕಾರಣ, ಚುನಾವಣಾ ಸಮಾವೇಶಗಳ ವೇಳೆ ಕೋವಿಡ್‌ ಮಾರ್ಗಸೂಚಿ ಪಾಲಿಸದ ಕಾರಣಕ್ಕೆ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು” ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ‌ ಅಭಿಪ್ರಾಯಪಟ್ಟಿತ್ತು. ತಮಿಳುನಾಡಿನ ಕರೂರ್ ಕ್ಷೇತ್ರದಲ್ಲಿ ಮತ ಎಣಿಕೆ ವೇಳೆ ಕೋವಿಡ್‌ ಮಾರ್ಗಸೂಚಿ ಪಾಲಿಸಲಾಗಿದೆಯೇ ಎಂಬ ಬಗ್ಗೆ ಎಐಎಡಿಎಂಕೆ ನಾಯಕ ಆರ್ ವಿಜಯಭಾಸ್ಕರ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿ ಹೈಕೋರ್ಟ್ ಈ ಹೇಳಿಕೆ ನೀಡಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು.

"ಯಾವುದೇ ಆಧಾರವಿಲ್ಲದೆ ಮತ್ತೊಂದು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರದ ಮೇಲೆ ಹತ್ಯೆಯ ಗಂಭೀರ ಆರೋಪಗಳನ್ನು ಮಾಡಿದೆ, ಅದು ಅಂತಿಮವಾಗಿ ಎರಡೂ ಸಂಸ್ಥೆಗಳಿಗೆ ಧಕ್ಕೆ ತಂದಿದೆ" ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿತ್ತು. ಅಲ್ಲದೆ ಹೈಕೋರ್ಟ್‌ಗಳ ಮೌಖಿಕ ಅವಲೋಕನಗಳನ್ನು ವರದಿ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಕೋರಲಾಗಿತ್ತು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್‌ ಶಾ ಅವರಿದ್ದ ಪೀಠ ತನ್ನ ತೀರ್ಪಿನಲ್ಲಿ ಕೆಲ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದೆ. ಪ್ರಜಾಪ್ರಭುತ್ವದ ಎಲ್ಲಾ ಅಂಗಗಳು ಪರಸ್ಪರ ನಿಯಂತ್ರಣಕ್ಕೆ ಒಳಪಟ್ಟಿರುವ ಸಾಂವಿಧಾನಿಕ ಚೌಕಟ್ಟಿನಲ್ಲಿ ಸಂಸ್ಥೆಯೊಂದು ಈ ರೀತಿಯ ಮನವಿ ಸಲ್ಲಿಸಬಹುದೇ? ವೈವಾಹಿಕ ಗೌಪ್ಯತೆಯಂತಹ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ನ್ಯಾಯಾಲಯಗಳು ಮುಕ್ತವಾಗಿರಬೇಕು ಎಂದು ಅದು ಹೇಳಿದೆ.

ನ್ಯಾಯಾಲಯಕ್ಕೆ ಮುಕ್ತ ಪ್ರವೇಶ ಕಲ್ಪಿಸುವುದು ಸಾಂವಿಧಾನಿಕ ಸ್ವಾತಂತ್ರ್ಯವಾಗಿದೆ. ಸಂವಿಧಾನದ 19 (1) (ಎ) ವಿಧಿ ) ಪತ್ರಿಕಾ ಸ್ವಾತಂತ್ರ್ಯವನ್ನು ಒಳಗೊಂಡಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನ್ಯಾಯಾಲಯ ವರದಿಗಾರಿಕೆಯ ಸ್ವಾತಂತ್ರ್ಯವೂ ಅಡಕವಾಗಿದೆ ಎಂದು ಪೀಠ ತೀರ್ಪಿನಲ್ಲಿ ವಿವರಿಸಿತು.

ನ್ಯಾಯಾಲಯ ಕಲಾಪಗಳನ್ನು ಡಿಜಿಟಲ್ ಮಾಧ್ಯಮ ನೈಜ ಸಮಯದಲ್ಲಿ (ರಿಯಲ್‌ ಟೈಮ್) ವರದಿ ಮಾಡುವುದನ್ನು ಉಲ್ಲೇಖಿಸಿದ ನ್ಯಾಯಾಲಯ ಜನ ಮಾಹಿತಿಗಾಗಿ ಅಂತರ್ಜಾಲವನ್ನು ಅವಲಂಬಿಸಿದ್ದಾರೆ. ಆದ್ದರಿಂದ ವರದಿ ಮಾಡದಂತೆ ನವ ಮಾಧ್ಯಮವನ್ನು ತಡೆಯುವುದು ಒಳ್ಳೆಯದಲ್ಲ. ಸಾಂವಿಧಾನಿಕ ಸಂಸ್ಥೆಗಳು ಈ ಬಗ್ಗೆ ದೂರು ನೀಡುವುದಕ್ಕಿಂತ ಉತ್ತಮ ಕಾರ್ಯದಲ್ಲಿ ತೊಡಗಬೇಕು ಎಂದಿತು.

ಮದ್ರಾಸ್ ಹೈಕೋರ್ಟ್ ಮಾಡಿದ ಟೀಕೆಗಳಿಗೆ ಸಂಬಂಧಿಸಿದಂತೆ, "... ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳನ್ನು ನ್ಯಾಯಾಲಯ ಎದುರಿಸುತ್ತಿತ್ತು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಟೀಕೆಗಳು ಕಠಿಣ ಮತ್ತು ರೂಪಕ ಅಸಮರ್ಪಕವಾಗಿದ್ದವು. ಕೋವಿಡ್‌ ಹರಡಿದ್ದಕ್ಕಾಗಿ ಇಸಿಐ ಅಪರಾಧಿ ಎಂದು ಹೈಕೋರ್ಟ್ ಆರೋಪಿಸಿಲ್ಲ ..." ಎಂದಿದೆ.

ಆದರೂ ನ್ಯಾ. ಚಂದ್ರಚೂಡ್‌ ತಪ್ಪಾಗಿ ಅರ್ಥೈಸಲು ಅನುವು ಮಾಡಿಕೊಡುವ ಆ ಕ್ಷಣದ ಹೇಳಿಕೆಗಳನ್ನು ನೀಡುವಾಗ ನ್ಯಾಯಾಲಯ ಸಂಯಮದಿಂದ ಇರಬೇಕೆಂದು ಕರೆ ನೀಡಿದರು. ಹೈಕೋರ್ಟ್‌ ಎಚ್ಚರಿಕೆಯಿಂದ ಮತ್ತು ಸಂಯಮದಿಂದ ವರ್ತಿಸಿದ್ದರೆ ವಿಚಾರಣೆಯನ್ನು ಸರಿಪಡಿಸಬಹುದಿತ್ತು. ಮೌಖಿಕ ಟೀಕೆಗಳು ಆದೇಶದ ಭಾಗವಲ್ಲ. ಹೀಗಾಗಿ ಅದನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ” ಎಂದಿತು.

ಇದೇ ವೇಳೆ ನ್ಯಾಯಾಲಯ ಕಲಾಪ ವರದಿಗಾರಿಕೆಯನ್ನು ತಡೆಯಬೇಕು ಎಂದು ಚುನಾವಣಾ ಆಯೋಗ ಮಾಡಿದ್ದ ಮನವಿಯಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಅರಿತ ನ್ಯಾಯಾಲಯ ನ್ಯಾಯಾಂಗವನ್ನು ಉತ್ತರದಾಯಿಯಾಗಿಸುವುದು ಅತ್ಯಗತ್ಯ ಎಂದು ಹೇಳಿತು.