ʼಕೊಲೆ ಅಪಾದನೆʼ ಹೇಳಿಕೆ: ಹೈಕೋರ್ಟ್‌ಗಳ ಸ್ಥೈರ್ಯಗೆಡಿಸಲಾಗದು ಎಂದು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿದ ಸುಪ್ರೀಂ

ಚುನಾವಣಾ ಆಯೋಗವನ್ನು ಖಂಡಿಸುವುದು ನಮ್ಮ ಉದ್ದೇಶವಲ್ಲ ಬದಲಿಗೆ ಸಂಸ್ಥೆಗಳನ್ನು ಬಲಪಡಿಸಬೇಕಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿರುವುದಾಗಿ ಪೀಠ ತಿಳಿಸಿತು.
Supreme Court and Election Commission of india
Supreme Court and Election Commission of india

ನಾವು ಹೈಕೋರ್ಟ್‌ಗಳ ಸ್ಥೈರ್ಯಗೆಡಿಸಲು ಸಾಧ್ಯವಾಗುವುದಿಲ್ಲ, ಅಂತೆಯೇ ನ್ಯಾಯಾಲಯಗಳ ಮೌಖಿಕ ಹೇಳಿಕೆಗಳನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧಿಸಲು ಸಾಧ್ಯವೂ ಇಲ್ಲ ಎಂದು ಸುಪ್ರೀಂಕೋರ್ಟ್‌ ಸೋಮವಾರ ಸ್ಪಷ್ಟಪಡಿಸಿದೆ. ಕೋವಿಡ್‌ ಹೆಚ್ಚಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಈ ಪ್ರತಿಕ್ರಿಯೆ ನೀಡಿದೆ.

ಮದ್ರಾಸ್‌ ಹೈಕೋರ್ಟ್‌ ಹೇಳಿಕೆಯನ್ನು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಮುಕ್ತ ಸಾಂವಿಧಾನಿಕ ಸಂಸ್ಥೆಯಾಗಿರುವ ಮದ್ರಾಸ್ ಹೈಕೋರ್ಟ್ "ಯಾವುದೇ ಆಧಾರವಿಲ್ಲದೆ ಮತ್ತೊಂದು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರದ ಮೇಲೆ ಹತ್ಯೆಯ ಗಂಭೀರ ಆರೋಪಗಳನ್ನು ಮಾಡಿದೆ, ಅದು ಅಂತಿಮವಾಗಿ ಎರಡೂ ಸಂಸ್ಥೆಗಳಿಗೆ ಧಕ್ಕೆ ತಂದಿದೆ" ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿತ್ತು. ಜೊತೆಗೆ ಹೈಕೋರ್ಟ್‌ಗಳ ಮೌಖಿಕ ಅವಲೋಕನಗಳನ್ನು ವರದಿ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಆಯೋಗ ಕೋರಿತ್ತು.

Also Read
ಮದ್ರಾಸ್ ಹೈಕೋರ್ಟ್‌ನ ʼಕೊಲೆ ಕೇಸ್ʼ ಹೇಳಿಕೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಚುನಾವಣಾ ಆಯೋಗ

ಹೊಣೆಗಾರಿಕೆಯನ್ನು ಸೃಷ್ಟಿಸುವ ದೃಷ್ಟಿಯಿಂದ ಮಾಧ್ಯಮಗಳಿಗೆ ಎಲ್ಲವನ್ನೂ ವರದಿ ಮಾಡಲು ಸಾಧ್ಯವಾಗಬೇಕು. ನ್ಯಾಯಾಲಯದಲ್ಲಿ ನಡೆವ ಮಾತುಕತೆಗಳು ಅನೇಕ ಪೂರಕ ಚರ್ಚೆಗಳಿಗೆ ಕಾರಣವಾಗುತ್ತವೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ಅವರಿದ್ದ ಪೀಠ ಹೇಳಿತು. ಆ ಮೂಲಕ ಹೈಕೋರ್ಟ್‌ಗಳಲ್ಲಿ ನಡೆದ ಮೌಖಿಕ ಅವಲೋಕನಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಅಲ್ಲದೆ, ನ್ಯಾಯಾಲಯಗಳಲ್ಲಿ ನಡೆಯುವ ಸಂಭಾಷಣೆಯು ಸ್ವಗತಗಳಲ್ಲ, ಬದಲಿಗೆ ಸಾರ್ವಜನಿಕ ಹಿತಾಸಕ್ತಿಯ ಸಾರ್ವಜನಿಕ ಮಹತ್ವದ ಚರ್ಚೆಗಳಾಗಿರುತ್ತವೆ ಎಂದು ಗಮನಸೆಳೆಯಿತು.

ಮುಂದುವರೆದು, ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡುವ ಯಾವುದೇ ಆದೇಶ ಹೈಕೋರ್ಟ್‌ಗಳ ಸ್ಥೈರ್ಯದ ಮೇಲೆ ಪರಿಣಾಮ ಬೀರಬಹುದು ಎಂದ ನ್ಯಾಯಾಲಯವು, "ನಾವು ಹೈಕೋರ್ಟ್‌ಗಳ ಸ್ಥೈರ್ಯಗೆಡಿಸಲಾಗದು. ಅವು ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ತಂಭಗಳು. ವಕೀಲ ಸಮುದಾಯ ಮತ್ತು ನ್ಯಾಯಪೀಠದ ನಡುವಿನ ಮುಕ್ತ ಸಂವಾದಗಳಲ್ಲಿ ಇಂತಹ ಹೇಳಿಕೆಗಳು ಅನೇಕ ಬಾರಿ ಮೂಡುತ್ತವೆ” ಎಂದಿತು.

Also Read
ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಕೋವಿಡ್‌ ನಿಯಮಗಳ ಉಲ್ಲಂಘನೆಗೆ ಮದ್ರಾಸ್‌ ಹೈಕೋರ್ಟ್‌ ಕೆಂಡಾಮಂಡಲ

"ಕೆಲವೊಮ್ಮೆ ನಾವು ಕಠಿಣವಾಗಿರುತ್ತೇವೆ ಏಕೆಂದರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮಹತ್ವದ್ದು ಏನಾದರೂ ನಡೆಯಬೇಕೆಂದು ಬಯಸುತ್ತೇವೆ. ಸರಣಿ ಆದೇಶಗಳನ್ನು ನೀಡಿದ ಬಳಿಕ ಹೈಕೋರ್ಟ್ ಕಳವಳಗೊಂಡಿರಬಹುದು” ಎಂದು ಪೀಠ ಗುಜರಾತ್‌ನ ಆಸ್ಪತ್ರೆಯೊಂದರಲ್ಲಿ ನಡೆದ ಅಗ್ನಿ ದುರಂತವನ್ನು ಉದಾಹರಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಆದೇಶ ನೀಡುವುದಾಗಿ ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿತು. ಚುನಾವಣಾ ಆಯೋಗವನ್ನು ಖಂಡಿಸುವುದು ನಮ್ಮ ಉದ್ದೇಶವಲ್ಲ, ಬದಲಿಗೆ ಸಂಸ್ಥೆಗಳನ್ನು ಬಲಪಡಿಸಬೇಕಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿರುವುದಾಗಿ ಅದು ಇದೇ ವೇಳೆ ತಿಳಿಸಿತು. ಚುನಾವಣಾ ಆಯೋಗದ ಪರವಾಗಿ ಹಿರಿಯ ನ್ಯಾಯವಾದಿ ರಾಕೇಶ್‌ ದ್ವಿವೇದಿ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com