Justice Surya Kant 
ಸುದ್ದಿಗಳು

ನಾಲ್ಸಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್

ನಾಲ್ಸಾದ ವಾಡಿಕೆಯಂತೆ ನ್ಯಾಯಮೂರ್ತಿ ಕಾಂತ್ ಅವರು ಸುಪ್ರೀಂ ಕೋರ್ಟ್‌ನ ಭಾವಿ ಸಿಜೆಐ ಬಿ ಆರ್ ಗವಾಯಿ ಅವರ ಉತ್ತರಾಧಿಕಾರಿಯಾಗಿ ಈ ಹುದ್ದೆ ಅಲಂಕರಿಸಲಿದ್ದಾರೆ ಅವರು.

Bar & Bench

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ನಾಲ್ಸಾ) ತನ್ನ ಮುಂದಿನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ನಾಮನಿರ್ದೇಶನ ಮಾಡಿದೆ.

1987ರ ಕಾನೂನು ಸೇವಾ ಪ್ರಾಧಿಕಾರಗಳ ಕಾಯಿದೆಯ ಸೆಕ್ಷನ್ 3 ರ ಉಪಸೆಕ್ಷನ್‌ (2) ರ ಷರತ್ತು (ಬಿ) ಅಡಿಯಲ್ಲಿ ನೀಡಲಾದ ಅಧಿಕಾರಗಳ ಅಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನಾಮನಿರ್ದೇಶನ ಮಾಡಿದ್ದು ಅವರ ಅಧಿಕಾರಾವಧಿ ಮೇ 14ರಿಂದ ಜಾರಿಗೆ ಬರಲಿದೆ. ಕಾನೂನು ಮತ್ತು ನ್ಯಾಯ ಸಚಿವಾಲಯ ಮೇ 9ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಯವರನ್ನು ಈ ಹುದ್ದೆಗೆ ನೇಮಿಸುವ ನಾಲ್ಸಾದ ವಾಡಿಕೆಯಂತೆ ನ್ಯಾಯಮೂರ್ತಿ ಕಾಂತ್ ಅವರು ಸುಪ್ರೀಂ ಕೋರ್ಟ್‌ನ ಭಾವಿ ಸಿಜೆಐ ಬಿ ಆರ್  ಗವಾಯಿ ಅವರ ಉತ್ತರಾಧಿಕಾರಿಯಾಗಿ ಈ ಹುದ್ದೆ ಅಲಂಕರಿಸಲಿದ್ದಾರೆ.

ನ್ಯಾಯಮೂರ್ತಿ ಸೂರ್ಯಕಾಂತ್ ಪ್ರಸ್ತುತ ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಯ (ಎಸ್‌ಸಿಎಲ್‌ಎಸ್‌ಸಿ) ಅಧ್ಯಕ್ಷರಾಗಿದ್ದಾರೆ. ಕಾನೂನು ನೆರವು ಉತ್ತೇಜಿಸುವಲ್ಲಿ ಮತ್ತು ಸಮಾಜದ ಅಂಚಿನಲ್ಲಿರುವ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ನ್ಯಾಯದ ದೊರಕಿಸಿಕೊಡುವಲ್ಲಿ ಸಮಿತಿ ಪ್ರಮುಖ ಪಾತ್ರ ವಹಿಸುತ್ತದೆ.  ನಾಲ್ಸಾದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅವರ ಅಧಿಕಾರಾವಧಿ  ಆರ್ಥಿಕ ಅಥವಾ ಸಾಮಾಜಿಕ ಸ್ಥಾನಮಾನ ಲೆಕ್ಕಿಸದೆ ಎಲ್ಲರಿಗೂ ನ್ಯಾಯ ಲಭ್ಯವಾಗುವಂತೆ ನೋಡಿಕೊಳ್ಳುವ ಸಂವಿಧಾನದ 39 ಎ ವಿಧಿಯ ಅಡಿಯಲ್ಲಿ ಸಾಂವಿಧಾನಿಕ ಆದೇಶವನ್ನು ಎತ್ತಿಹಿಡಿಯುವ ನಾಲ್ಸಾದ ಧ್ಯೇಯವನ್ನು ಮತ್ತಷ್ಟು ಹೆಚ್ಚಿಸಲಿದೆ.

ಅವರು ಈ ಹಿಂದೆ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಹಲವು ಮಹತ್ವದ ತೀರ್ಪುಗಳನ್ನು ನೀಡಿರುವ ಅವರು ನ್ಯಾಯಾಂಗ ಸುಧಾರಣೆ, ಕಾನೂನು ನೆರವು ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗೆ ಶ್ರಮಿಸಿದ್ದಾರೆ.