Retd. Justice AM Sapre with Supreme Court 
ಸುದ್ದಿಗಳು

ಚಹಾ ಕಾರ್ಮಿಕರ ವೇತನ ವ್ಯಾಜ್ಯ ಇತ್ಯರ್ಥ: ಸಂಭಾವನೆ ಪಡೆಯದ ನ್ಯಾ. ಎ ಎಂ ಸಪ್ರೆ ಅವರಿಗೆ ಸುಪ್ರೀಂ ಕೋರ್ಟ್ ಶ್ಲಾಘನೆ

ನ್ಯಾಯಮೂರ್ತಿ ಸಪ್ರೆ ಅವರನ್ನು ಶ್ಲಾಘಿಸಿದ ನ್ಯಾಯಾಲಯ, ಅವರಿಗೆಂದು ಮೀಸಲಿಟ್ಟಿದ್ದ ಹಣವನ್ನು ಚಹಾ ಎಸ್ಟೇಟ್‌ನ ಮೃತ ಕಾರ್ಮಿಕರ ಪತ್ನಿಯರಿಗೆ ನೀಡುವಂತೆ ನಾಲ್ಕು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿತು.

Bar & Bench

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಅಸ್ಸಾಂನ ಚಹಾ ಎಸ್ಟೇಟ್ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥಪಡಿಸಿದ್ದಕ್ಕಾಗಿ ₹20 ಲಕ್ಷ ಸಂಭಾವನೆ ಸ್ವೀಕರಿಸಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ಇತ್ತೀಚೆಗೆ ನಿರಾಕರಿಸಿದ್ದು ಇದಕ್ಕೆ ಸುಪ್ರೀಂ ಕೋರ್ಟ್‌ ಮೆಚ್ಚುಗೆ ವ್ಯಕ್ತಪಡಿಸಿದೆ [ಅಂತರರಾಷ್ಟ್ರೀಯ ಆಹಾರ ಮತ್ತು ಕೃಷಿ ಮತ್ತು ಇತರರ ಒಕ್ಕೂಟ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].

2020ರಲ್ಲಿ, ಕಾರ್ಮಿಕರ ಹಕ್ಕುಗಳ ಇತ್ಯರ್ಥಕ್ಕಾಗಿ ನ್ಯಾಯಮೂರ್ತಿ ಸಪ್ರೆ ನೇತೃತ್ವದ ಏಕಸದಸ್ಯ ಸಮಿತಿ ನೇಮಕ ಮಾಡಲಾಗಿತ್ತು. ಟೀ ಎಸ್ಟೇಟ್ ಕಾರ್ಮಿಕರಿಗೆ ನೀಡಬೇಕಿದ್ದ ಬಾಕಿ ಮೊತ್ತ ಪಡೆಯಲು ನ್ಯಾಯಮೂರ್ತಿಗಳು ಅವರಿತವಾಗಿ ಯತ್ನಿಸಿದ್ದು ಅದಕ್ಕಾಗಿ ಅವರಿಗೆ ತಲಾ ₹5 ಲಕ್ಷ ಪಾವತಿಸುವಂತೆ ಸುಪ್ರೀಂ ಕೋರ್ಟ್ ನಾಲ್ಕು ರಾಜ್ಯಗಳಿಗೆ ಏಪ್ರಿಲ್ 17 ರಂದು ಆದೇಶಿಸಿತ್ತು.

ಆದರೆ ಪ್ರಕರಣ ಒಳಗೊಂಡಿರುವ ಕಾರಣಗಳನ್ನು ಪರಿಗಣಿಸಿ ನ್ಯಾ. ಸಪ್ರೆ ಅವರು ಆ ಮೊತ್ತ ಪಡೆಯಲು ಈಚೆಗೆ ನಿರಾಕರಿಸಿದ್ದರು.

ನ್ಯಾ, ಸಪ್ರೆ ಅವರ ಕಾರ್ಯವನ್ನು ಏಪ್ರಿಲ್ 23ರಂದು ನೀಡಿದ ಆದೇಶದಲ್ಲಿ ಶ್ಲಾಘಿಸಿರುವ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಅವರ ಭಾವನೆಗಳನ್ನು ಗೌರವಿಸುವುದಾಗಿ ಹೇಳಿದೆ.

"ಈ ಕಾರ್ಯಕ್ಕೆ ಮಾತ್ರವಲ್ಲದೆ, ಚಹಾ ಬೆಳೆಯುವ ರಾಜ್ಯಗಳಲ್ಲಿನ ಬಡ ಕಾರ್ಮಿಕರಿಗಾಗಿ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳು ಸಲ್ಲಿಸಿದ ಸೇವೆಗೂ ನಾವು ನಮ್ಮ ಕೃತಜ್ಞತೆ ದಾಖಲಿಸುತ್ತೇವೆ " ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾ. ಸಪ್ರೆ ಅವರಿಗೆಂದು ಮೀಸಲಿಟ್ಟಿದ್ದ ಹಣವನ್ನು ಚಹಾ ಎಸ್ಟೇಟ್‌ನ ಮೃತ ಕಾರ್ಮಿಕರ ಪತ್ನಿಯರಿಗೆ ನೀಡುವಂತೆ ನಿರ್ದೇಶಿಸಿತು.

ಚಹಾ ತೋಟದ ಕಾರ್ಮಿಕರ ಬಾಕಿ ವೇತನ ಪಾವತಿಗಾಗಿ 2006ರಲ್ಲಿ ಅಂತರರಾಷ್ಟ್ರೀಯ ಆಹಾರ ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಅರ್ಜಿ ಸಲ್ಲಿಸಿತ್ತು. 2010ರಲ್ಲಿ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ನಿರ್ದೇಶನಗಳನ್ನು ನೀಡಿತ್ತು. ಆದರೆ, ಸರ್ಕಾರ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿ ಅರ್ಜಿದಾರರು ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ನಿವೃತ್ತ ಕಾರ್ಮಿಕರ ಬಾಕಿ ಪಾವತಿಸಲು ರಾಜ್ಯ ಸರ್ಕಾರಗಳಿಗೆ ಏಪ್ರಿಲ್ 2018ರಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ನಿರ್ದೇಶನಗಳನ್ನು ಭಾಗಶಃ ಮಾತ್ರ ಪಾಲಿಸಿದ್ದರಿಂದ ಸುಪ್ರೀಂ ಕೋರ್ಟ್ ಸಮಸ್ಯೆಯ ಪರಿಹಾರಕ್ಕಾಗಿ ನ್ಯಾ. ಸಪ್ರೆ ಅವರ ನೇತೃತ್ವದಲ್ಲಿ ಏಕಸದಸ್ಯ  ರಚಿಸಿತ್ತು. ಕಾಲಕಾಲಕ್ಕೆ, ನ್ಯಾಯಮೂರ್ತಿ ಸಪ್ರೆ ಅವರು ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸಿರುವುದನ್ನು ವಿವರಿಸಿರುವ ವರದಿಗಳನ್ನು ಸಲ್ಲಿಸಿದ್ದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

INTERNATIONAL_UNION_OF_FOOD_AGR____ORS__vs__UNION_OF_INDIA.pdf
Preview