Farmers protest, Delhi-Haryana border, Ghazipur 
ಸುದ್ದಿಗಳು

ರೈತ ನಾಯಕನಿಗೆ ವೈದ್ಯಕೀಯ ನೆರವು: ಅಸಹಾಯಕತೆ ವ್ಯಕ್ತಪಡಿಸಿದ ಪಂಜಾಬ್ ಸರ್ಕಾರದ ವಿರುದ್ಧ ಕೆಂಡಕಾರಿದ ಸುಪ್ರೀಂ ಕೋರ್ಟ್‌

ರೈತರು ಪ್ರತಿಭಟನಾ ಸ್ಥಳದ ಸುತ್ತಲೂ ತೀವ್ರ ನಿಗಾ ಇರಿಸಿದ್ದಾರೆ. ಡಲ್ಲೇವಾಲ್‌ ಅವರನ್ನೇನಾದರೂ ಕರೆದೊಯ್ದರೆ ಆಗ ತೊಂದರೆಯಾದೀತು ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ವಾದ ಮಂಡಿಸಿದಾಗ ನ್ಯಾಯಾಲಯ ಕಿಡಿಕಾರಿತು.

Bar & Bench

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್‌ ಅವರಿಗೆ ವೈದ್ಯಕೀಯ ನೆರವು ನೀಡಲು ರಾಜ್ಯಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಪಂಜಾಬ್ ಸರ್ಕಾರದ ವಾದಕ್ಕೆ ಸುಪ್ರೀಂ ಕೋರ್ಟ್ ಶನಿವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಡಲ್ಲೇವಾಲ್‌ ಅವರಿಗೆ ವೈದ್ಯಕೀಯ ನೆರವು ನೀಡುವ ಸರ್ಕಾರದ ಯತ್ನಗಳಿಗೆ ಉಳಿದ ಪ್ರತಿಭಟನಾಕಾರರು ಅಡ್ಡಿ ಉಂಟುಮಾಡುತ್ತಿದ್ದಾರೆ. ಹೀಗಾಗಿ ತಾನು ಅಸಹಾಯಕ ಎಂದು ಪಂಜಾಬ್‌ ಸರ್ಕಾರ ತಿಳಿಸಿತು.

ರೈತರು ಪ್ರತಿಭಟನಾ ಸ್ಥಳದ ಸುತ್ತಲೂ ತೀವ್ರ ನಿಗಾ ಇರಿಸಿದ್ದಾರೆ. ಡಲ್ಲೇವಾಲ್ ಅವರನ್ನೇನಾದರೂ ಕರೆದೊಯ್ದರೆ ಆಗ ತೊಂದರೆಯಾದೀತು ಎಂದು ಪಂಜಾಬ್‌ ಅಡ್ವೊಕೇಟ್‌ ಜನರಲ್‌ ಗುರ್ಮಿಂದರ್ ಸಿಂಗ್ ವಾದ ಮಂಡಿಸಿದರು. ನಾವು ಅಸಹಾಯಕರಾಗಿದ್ದು  ಸಮಸ್ಯೆಯಲ್ಲಿ ಮುಳುಗಿದ್ದೇವೆ ಎಂದರು.

ಆಗ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಸುಧಾಂಶು ಧುಲಿಯಾ ಅವರಿದ್ದ  ಪೀಠ, ಡಲ್ಲೇವಾಲ್‌ಗೆ ವೈದ್ಯಕೀಯ ನೆರವು ನೀಡಬೇಕು. ಅಗತ್ಯವಿದ್ದರೆ ಅವರನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ತಾನು ಹಿಂದೆ ನೀಡಿದ್ದ ಆದೇಶಗಳನ್ನು ಪಾಲಿಸಬೇಕು ಎಂದು ತಾಕೀತು ಮಾಡಿತು.

ತಾನು ಅಸಹಾಯಕ ಎಂದು ರಾಜ್ಯ ಸರ್ಕಾರವೇ ಹೇಳಿದರೆ ಉಂಟಾಗುವ ಪರಿಣಾಮ ಏನೆಂದು ತಿಳಿದಿದೆಯೇ? ಎಂದು ಪ್ರಶ್ನಿಸಿದ ನ್ಯಾಯಾಲಯ ಅನಗತ್ಯ ಬಲಪ್ರಯೋಗ ಮಾಡಿ ಎಂದು ತಾನು ಹೇಳುತ್ತಿಲ್ಲ ಎಂಬುದಾಗಿ ಸ್ಪಷ್ಟಪಡಿಸಿತು.

ಅಲ್ಲದೆ ಡಲ್ಲೇವಾಲ್ ಅವರಿಗೆ ವೈದ್ಯಕೀಯ ನೆರವು ನೀಡಲು ಪಂಜಾಬ್ ಸರ್ಕಾರ ನಡೆಸುತ್ತಿರುವ ಯತ್ನಕ್ಕೆ ಅಡ್ಡಿ ಉಂಟುಮಾಡುತ್ತಿರುವ ರೈತರ ಬಗ್ಗೆಯೂ ಇದೇ ವೇಳೆ ಅದು ತೀವ್ರ ಅತೃಪ್ತಿ ವ್ಯಕ್ತಪಡಿಸಿತು.

ಶಾಂತಿಯುತ ಆಂದೋಲನದ ಭಾಗವಾಗಿ ರೈತರ ಚಳವಳಿ ನಡೆಸಿದರೆ ಅದು ಅರ್ಥವಾಗುವಂಥದ್ದು. ಆದರೆ ಯಾರನ್ನಾದರೂ ಆಸ್ಪತ್ರೆಗೆ ಸೇರಿಸದಂತೆ ತಡೆಯಲು ರೈತರು ಒಗ್ಗೂಡುವುದನ್ನು ಎಲ್ಲಿಯೂ ಕೇಳಿಲ್ಲ ಎಂದಿತು.

ಕಡೆಗೆ ತನ್ನ ಆದೇಶ ಪಾಲಿಸಲು ರಾಜ್ಯಕ್ಕೆ ಗಡುವು ವಿಧಿಸಿದ ನ್ಯಾಯಾಲಯ ಆದೇಶ ಪಾಲನೆಗಾಗಿ ಕೇಂದ್ರ ಸರ್ಕಾರದ ನೆರವು ಪಡೆಯಬಹುದು ಎಂದು ಸಲಹೆ ನೀಡಿತು.

ಡಲ್ಲೇವಾಲ್ ಅವರಿಗೆ ವೈದ್ಯಕೀಯ ನೆರವು ನೀಡಲು ಪಂಜಾಬ್ ಸರ್ಕಾರ ನಡೆಸುತ್ತಿರುವ ಯತ್ನಕ್ಕೆ ಅಡ್ಡಿ ಉಂಟುಮಾಡುತ್ತಿರುವ ರೈತರನ್ನು ಸುಪ್ರೀಂ ಕೋರ್ಟ್‌ ಶುಕ್ರವಾರವೂ ತೀವ್ರವಾಗಿ ಖಂಡಿಸಿತ್ತು.

ಡಲ್ಲೇವಾಲ್‌ ಅವರು ವೈದ್ಯಕೀಯ ನೆರವು ನಿರಾಕರಿಸುತ್ತಿದ್ದಾರೆ. ಉಳಿದ ರೈತರು ನಿಗಾ ಇರಿಸುತ್ತಿದ್ದು ಡಲ್ಲೇವಾಲ್‌ ಅವರಿಗೆ ವೈದ್ಯಕೀಯ ನೆರವು ನೀಡುವ ಯತ್ನಗಳಿಗೆ ಅಡ್ಡಿ ಉಂಟುಮಾಡುತ್ತಿದ್ದಾರೆ. ರೈತರನ್ನು ಎದುರಿಸುವುದು ಇಲ್ಲವೇ ಅವರೊಂದಿಗೆ ರಾಜಿಯಾಗುವುದು ಉಳಿದಿರುವ ಪರಿಹಾರ. ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆಗೆ ಮುಂದಾದರೆ ಪರಿಸ್ಥಿತಿ ತಿಳಿಯಾಗಬಹುದು ಎಂದು ಇಂದಿನ ವಿಚಾರಣೆ  ವೇಳೆ ಅಡ್ವೊಕೇಟ್‌ ಜನರಲ್‌ ಪ್ರತಿಪಾದಿಸಿದರು.

ಆದರೆ ಈ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. “ಇದು ನಡೆಯಲು ಕಾರಣರಾಗಿದ್ದು ಯಾರು? ಅಲ್ಲಿ ಈ ಮಾನವಶಕ್ತಿಯ ಕೋಟೆ ನಿರ್ಮಾಣವಾಗಲು ಅನುಮತಿಸಿದ್ದು ಯಾರು? ಕಾನೂನು ಸುವ್ಯವವಸ್ಥೆಯನ್ನು ನೋಡಿಕೊಳ್ಳುತ್ತಿರುವುದು ಯಾರು?” ಎಂದು ನ್ಯಾಯಾಲಯ ಮಾರ್ಮಿಕವಾಗಿ ಪ್ರಶ್ನಿಸಿತು.

ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದ ಪರಿಸ್ಥಿತಿ ಹದಗೆಡಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ತಿರುಗೇಟು ನೀಡಿದ ಪಂಜಾಬ್‌ ಸರ್ಕಾರ “ಹಾಗೆ ಹೇಳುವುದು ಸರಿಯಲ್ಲ. ಕೇಂದ್ರದ ಮಧ್ಯಪ್ರವೇಶ ಸಹಾಯ ಮಾಡಲಿದೆ” ಎಂದಿತು.

ಈ ಹಂತದಲ್ಲಿ ನ್ಯಾಯಾಲಯವು ಡಲ್ಲೇವಾಲ್‌ ಅವರ ಜೀವಕ್ಕೆ ಏನಾದರೂ ಹಾನಿಯಾದರೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದ ಪೀಠ  ಕಡೆಗೆ ನೀವು ಅಷ್ಟಿಷ್ಟು ಸಹಾಯ ಮಾಡಿದರೂ ಅದು ಅತ್ಯಲ್ಪ ಮತ್ತು ತಡವಾದದ್ದಾಗಿರುತ್ತದೆ ಎಂದಿತು.

ತನ್ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ ನ್ಯಾಯಾಲಯ ಪ್ರಕರಣವನ್ನು ಡಿಸೆಂಬರ್ 31ಕ್ಕೆ ಮುಂದೂಡಿತು.