ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾನೂನು ನೆರವು ವಕೀಲರಿಗೆ ಹೆರಿಗೆ ಸವಲತ್ತುಗಳನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಅನ್ವೇಷಾ ದೇಬ್ ಮತ್ತು ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ಸಂಬಂಧ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
"ಹೈಕೋರ್ಟ್ ಜಾರಿಗೊಳಿಸಿದ ಆದೇಶದಲ್ಲಿ ಮಧ್ಯಪ್ರವೇಶಿಸಲು ಒಲವಿಲ್ಲ. ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸಲಾಗಿದೆ," ಎಂದು ಅದು ಗಮನಿಸಿದೆ.
ಕಾನೂನು ಸೇವಾ ಪ್ರಾಧಿಕಾರದೊಂದಿಗೆ ತೊಡಗಿಕೊಂಡಿರುವ ವಕೀಲರು ʼಉದ್ಯೋಗಿʼ ಅಲ್ಲವಾದ್ದರಿಂದ , ಹೆರಿಗೆ ಸೌಲಭ್ಯಗಳ ಕಾಯಿದೆ- 1961ರ ಅಡಿಯಲ್ಲಿ ಹೆರಿಗೆ ಸವಲತ್ತು ಪಡೆಯಲು ಅರ್ಹರಲ್ಲ ಎಂದು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ಕಳೆದ ಏಪ್ರಿಲ್‌ನಲ್ಲಿ ನುಡಿದಿತ್ತು.
ಆ ಮೂಲಕ ವಕೀಲರಾದ ಅನ್ವೇಷಾ ದೇಬಾ ಅವರಿ ವೈದ್ಯಕೀಯ, ವಿತ್ತೀಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಅದು ರದ್ದುಗೊಳಿಸಿತ್ತು.
ಹೆರಿಗೆ ಸೌಲಭ್ಯ ಕಾಯಿದೆ ಪ್ರಕಾರ ಉದ್ಯೋಗದ ಸ್ವರೂಪದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿತ್ತು. ಡಿಎಸ್‌ಎಲ್‌ಎಸ್‌ಎ ನಂತರ ವಿಭಾಗೀಯ ಪೀಠದೆದುರು ತೀರ್ಪನ್ನು ಪ್ರಶ್ನಿಸಿತ್ತು.